ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿ ಸದ್ಯ ಮೈದಾನದಲ್ಲಿ ಕಾಣಿಸಿಕೊಳ್ಳದೇ ಸುಮಾರು ಎರಡು ತಿಂಗಳಿಗೂ ಅಧಿಕ ಸಮಯವಾಗಿದ್ದು, ಈ ನಡುವೆ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಧೋನಿ ಲಭ್ಯತೆ ಬಗ್ಗೆ ಮಾತನಾಡಿದ್ದಾರೆ.
ಧೋನಿ ತಮ್ಮ ಲಭ್ಯತೆ ಬಗ್ಗೆ ತಾವೇ ಸೂಕ್ತ ನಿರ್ಧಾರ ಕೈಗೊಂಡು ಆಯ್ಕೆ ಸಮಿತಿ ತಿಳಿಸಬೇಕು. ಈ ಮೂಲಕ ಅವರ ಕರಿಯರ್ ಬಗ್ಗೆ ಆಯ್ಕೆ ಸಮಿತಿಗೆ ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ ಎಂದಿರುವ ಕೋಚ್ ರವಿ ಶಾಸ್ತ್ರಿ, ಧೋನಿ ಎಂದೆಂದಿಗೂ ಭಾರತೀಯ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ಪ್ರಶಂಸಿಸಿದ್ದಾರೆ.
ರವಿ ಶಾಸ್ತ್ರಿ ಲಭ್ಯತೆ ಹಾಗೂ ನಿವೃತ್ತಿ ವಿಚಾರವನ್ನು ಸಂಪೂರ್ಣವಾಗಿ ಧೋನಿಗೆ ವಹಿಸಿದ್ದು, ಈ ಮೂಲಕ ಹಿರಿಯ ಆಟಗಾರನ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸದಿರಲು ಕೋಚ್ ಹಾಗೂ ಆಯ್ಕೆ ಸಮಿತಿ ನಿರ್ಧರಿಸಿದಂತಿದೆ.
ಧೋನಿ ಫ್ಯಾನ್ಸ್ಗೆ ಬೇಸರದ ಸುದ್ದಿ..! ಏನದು?
ಧೋನಿ ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಜುಲೈ 9ರಂದು ನ್ಯೂಜಿಲ್ಯಾಂಡ್ ವಿರುದ್ಧ ನಡೆದ ವಿಶ್ವಕಪ್ ಸೆಮೀಸ್ನಲ್ಲಿ ಧೋನಿ ಮೈದಾನಕ್ಕಿಳಿದಿದ್ದರು. ನಂತರದಲ್ಲಿ ವಿಂಡೀಸ್ ಪ್ರವಾಸ ಹಾಗೂ ತವರಿನ ದ.ಆಫ್ರಿಕಾ ವಿರುದ್ಧ ಸರಣಿಯಿಂದಲೂ ಧೋನಿ ಹೊರಗುಳಿದಿದ್ದರು. ನವೆಂಬರ್ನಲ್ಲಿ ನಡೆಯುವ ಬಾಂಗ್ಲಾದೇಶದ ಸರಣಿಗೂ ಧೋನಿ ಅಲಭ್ಯರಾಗಿದ್ದಾರೆ.