ಬ್ರಿಸ್ಬೇನ್: ಆಸ್ಟ್ರೇಲಿಯಾ ತಂಡ ಮೂರು ದಶಕದಿಂದ ಸೋಲು ಕಾಣದೆ ಮೆರೆದಾಡುತ್ತಿರುವ ಬ್ರಿಸ್ಬೇನ್ನ ಗಬ್ಬಾದಲ್ಲಿ ನಾಳೆಯಿಂದ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ 55 ಪಂದ್ಯಗಳನ್ನಾಡಿದ್ದು, 33 ಜಯ, 13 ಡ್ರಾ , ಒಂದು ಟೈ ಹಾಗೂ 8 ಪಂದ್ಯಗಳಲ್ಲಿ ಸೋಲು ಕಂಡಿದೆ. 1988ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸೀಸ್ ಕೊನೆಯ ಸೋಲು ಅನುಭವಿಸಿದೆ. ಅಲ್ಲಿಂದೀಚೆಗೆ ಸೋಲೆನ್ನುವುದು ಆಸೀಸ್ ಬಳಗದ ಮುಂದೆ ಮಂಡಿಯೂರಿಯೇ ಕುಳಿತಿದೆ ಎನ್ನಬಹುದು.
ಆಸ್ಟ್ರೇಲಿಯಾದ ದಾಖಲೆಗಳು ನಮ್ಮ ಕಣ್ಣಮುಂದಿರುವಾಗ ಭಾರತ ಅಲ್ಲಿ ಗೆಲ್ಲಬಹುದು ಎಂದು ಊಹೆ ಮಾಡಲೂ ಕೂಡಾ ಸಾಧ್ಯವಿಲ್ಲ. ಆದರೆ ಡ್ರಾ ಸಾಧಿಸಿದರೆ ಆ ತಂಡ ಸತತ ಮೂರನೇ ಸರಣಿಯ ನಂತರವೂ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುತ್ತದೆ. 2017ರಿಂದಲೂ ಭಾರತ ಈ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡು ಬರುತ್ತಿದೆ.
ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಹನುಮ ವಿಹಾರಿ ಅಂತಹ ಸ್ಟಾರ್ ಆಟಗಾರರು ಆಸ್ಟ್ರೇಲಿಯಾ ಭದ್ರಕೋಟೆಯ ಟೆಸ್ಟ್ನಲ್ಲಿ ಕಣಕ್ಕಿಳಿಯುತ್ತಿಲ್ಲ. ಇವರ ಬದಲಾಗಿ ಕೇವಲ 1 ಅಥವಾ 2 ಟೆಸ್ಟ್ ಪಂದ್ಯಗಳನ್ನಾಡಿರುವ ಬೌಲರ್ಗಳನ್ನು ಅನಿವಾರ್ಯವಾಗಿ ಭಾರತ ತಂಡ ಕಣಕ್ಕಿಳಿಸುತ್ತಿದೆ. ಅನುಭವಿಗಳು ಮತ್ತು ಅತ್ಯಂತ ಕಠಿಣ ಮೈದಾನದಲ್ಲಿ ಆಡುತ್ತಿರುವುದು ನಿಜಕ್ಕೂ ಭಾರತ ತಂಡದ ಕೆಟ್ಟ ಕ್ಷಣವಾಗಲಿದೆ. ಮಯಾಂಕ್ ಅಗರ್ವಾಲ್ ಮತ್ತು ಅಶ್ವಿನ್ ಬಗ್ಗೆ ಇನ್ನು ಖಚಿತತೆ ಇಲ್ಲದೆ ಇರುವುದು ಕೂಡ ಭಾರತಕ್ಕೆ ಆತಂಕ ಮೂಡಿಸಿದೆ.
ನಾಳೆ ವೈದ್ಯಕೀಯ ತಂಡದ ಜೊತೆ ಮಾತುಕತೆ ನಡೆಸಿದ ನಂತರ ಬುಮ್ರಾ, ಅಶ್ವಿನ್ ಫಿಟ್ ಆಗಲಿದ್ದಾರೆ ಎನ್ನುವುದನ್ನು ಖಚಿತಪಡಿಸಲಿದ್ದೇವೆ ಎಂದು ಬ್ಯಾಟಿಂಗ್ ಕೋಚ್ ಮಾಹಿತಿ ನೀಡಿದ್ದಾರೆ. ಬುಮ್ರಾ ನಾಳಿನ ಪಂದ್ಯದಲ್ಲಿ ಆಡಿದರೆ ಭಾರತಕ್ಕೆ ಸ್ವಲ್ಪ ಬಲ ಬಂದಂತಾಗಲಿದೆ.
ಆದರೆ ರೋಹಿತ್ ಶರ್ಮಾ, ರಹಾನೆ ಮತ್ತು ಪೂಜಾರ ಅವರ ಆತ್ಮವಿಶ್ವಾಸದ ಆಟ ಹಾಗೂ ಪಂತ್ ಫಾರ್ಮ್ನಲ್ಲಿರುವುದರಿಂದ ಬ್ಯಾಟಿಂಗ್ ವಿಭಾಗದಲ್ಲಿ ಸಮಾಧಾನ ತಂದಿದೆ. ವಿಹಾರಿ ಅನುಪಸ್ಥಿತಿಯಲ್ಲಿ ಪಂತ್ ಪರಿಪೂರ್ಣ ಬ್ಯಾಟ್ಸ್ಮನ್ ಆಗಿ ಆಡಲಿ ಮತ್ತು ಕೀಪಿಂಗ್ ಜವಾಬ್ದಾರಿಯನ್ನು ವೃದ್ಧಿಮಾನ್ ಸಹಾ ನಿರ್ವಹಿಸಲಿ ಎಂಬ ಹಿರಿಯ ಕ್ರಿಕೆಟಿಗರ ಅಭಿಪ್ರಾಯವನ್ನು ಟೀಮ್ ಇಂಡಿಯಾ ಕಾರ್ಯರೂಪಕ್ಕೆ ತಂದರೆ ಆಸೀಸ್ ಬೌಲರ್ಗಳಿಗೆ ತಕ್ಕಮಟ್ಟಿನ ಪೈಪೋಟಿ ನೀಡಬಹುದು ಎನ್ನಲಾಗುತ್ತಿದೆ.
ಬೌಲಿಂಗ್ ವಿಭಾಗದಲ್ಲಿ ಭಾರತ 5 ಬೌಲರ್ಗಳ ಬದಲಾಗಿ ಕೇವಲ 4 ಸ್ಪೆಷಲಿಸ್ಟ್ ಬೌಲರ್ಗಳೊಂದಿಗೆ ಹೋಗುವ ಸಾಧ್ಯತೆಯಿದೆ. ಆದರೂ ಟೀಮ್ ಇಂಡಿಯಾ ಬೌಲಿಂಗ್ ದಾಳಿ ತುಂಬಾ ಸಾಧಾರಣವಾಗಿದೆ. ಸಿರಾಜ್ 2 ಪಂದ್ಯ, ಸೈನಿ ಕೇವಲ ಒಂದು ಹಾಗೂ ಮೂರನೇ ಬೌಲರ್ ಸ್ಥಾನದಲ್ಲಿ ಬರಲಿರುವ ಶಾರ್ದುಲ್ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಕೇವಲ 10 ಎಸೆತಗಳನ್ನು ಮಾತ್ರ ಮಾಡಿದ್ದಾರೆ. ಅದು ಎರಡು ವರ್ಷಗಳ ಹಿಂದೆ. ಹಾಗಾಗಿ ಭಾರತದ ಬೌಲಿಂಗ್ ದಾಳಿ ಆಸ್ಟ್ರೇಲಿಯಾದ ಸ್ಮಿತ್, ವಾರ್ನರ್, ಲಾಬುಶೆನ್ ಅಂತಹ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಹೊರೆಯಾಗುವುದಿಲ್ಲ ಎಂಬುದು ಖಂಡಿತ ಒಪ್ಪಿಕೊಳ್ಳಬೇಕಾಗಿದೆ.
ಆಸ್ಟ್ರೇಲಿಯಾ ತಂಡದಲ್ಲೂ ಗಾಯದ ಸಮಸ್ಯೆ ಎದುರಾಗಿದೆ. ಯುವ ಬ್ಯಾಟ್ಸ್ಮನ್ ವಿಲ್ ಪುಕೋವ್ಸ್ಕಿ ನಾಳಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಅವರ ಬದಲಾಗಿ ಯುವ ಬ್ಯಾಟ್ಸ್ಮನ್ ಮಾರ್ಕಸ್ ಹ್ಯಾರೀಸ್ ಕಣಕ್ಕಿಳಿಯಲಿದ್ದಾರೆ. ಇದೊಂದು ಬದಲಾವಣೆ ಬಿಟ್ಟರೆ ಆಸ್ಟ್ರೇಲಿಯಾ ತಂಡ ತಮ್ಮ ಹಿಂದಿನ ತಂಡವನ್ನೇ ಮತ್ತೆ ಕಣಕ್ಕಿಳಿಸಲಿದೆ.
ಫಲಿತಾಂಶ ಏನೇ ಆಗಲಿ ಭಾರತ ತಂಡ ಈಗಾಗಲೇ ರಹಾನೆ ನೇತೃತ್ವದಲ್ಲಿ ವೈಭವ ಕಂಡಿದೆ. ಹಾಗಾಗಿ ನಾಳಿನ ಪಂದ್ಯದಲ್ಲೂ ಏನಾದರೂ ಅದ್ಭುತವನ್ನು ಸೃಷ್ಟಿಸಲಿದೆಯಾ? ಎಂದು ಕಾದು ನೋಡಬೇಕಿದೆ.