ಮುಂಬೈ: 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ದುಬೈನಲ್ಲಿ ನಡೆಯಲಿದ್ದು, ಅದರಲ್ಲಿ ಪ್ರಮುಖ ಪ್ರಾಯೋಜಕ ಸಂಸ್ಥೆಯನ್ನಾಗಿ ಚೀನಿ ಕಂಪನಿ ವಿವೋ ಉಳಿಸಿಕೊಳ್ಳಲು ಬಿಸಿಸಿಐ ನಿರ್ಧಾರ ಕೈಗೊಂಡಿತು. ಆದರೆ ಇದಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗಿದ್ದರಿಂದ ಬಿಸಿಸಿಐ ತನ್ನ ನಿರ್ಧಾರ ಕೈಬಿಟ್ಟಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಚೀನಾ ಕಂಪನಿ ಪ್ರಾಯೋಜಕತ್ವ ಮುಂದುವರಿಕೆ: ಅಭಿಮಾನಿಗಳಿಂದ ಆಕ್ರೋಶ
ಭಾರತ-ಚೀನಾ ಯೋಧರ ನಡುವೆ ಬಡಿದಾಟ ಉಂಟಾದ ಬಳಿಕ ಕೇಂದ್ರ ಸರ್ಕಾರ ಚೀನಾದೊಂದಿಗಿನ ಅನೇಕ ಒಪ್ಪಂದಗಳು, ಮೊಬೈಲ್ ಆ್ಯಪ್‌ಗಳನ್ನು ರದ್ದು ಮಾಡಿತ್ತು. ಆದರೆ ಬಿಸಿಸಿಐ ಮಾತ್ರ 2020ರ ಐಪಿಎಲ್ನಲ್ಲಿ ವಿವೋ ಕಂಪೆನಿ ಪ್ರಾಯೋಜಕತ್ವವನ್ನು ಉಳಿಸಿಕೊಳ್ಳಲು ನಿರ್ಧರಿಸಿತ್ತು. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಡೆಗೆ ವ್ಯಾಪಕ ಟೀಕೆ, ಆಕ್ರೋಶ ಕೇಳಿಬಂದಿತ್ತು.
2017ರಲ್ಲಿ ವಾರ್ಷಿಕವಾಗಿ ವಿವೋ, ಬಿಸಿಸಿಐಗೆ 440 ಕೋಟಿ ರೂಪಾಯಿ ನೀಡಿದೆ. ಬಳಿಕ 2018ರಲ್ಲಿ ಮುಂದಿನ ವರ್ಷಗಳಿಗೆ 2,199 ಕೋಟಿ ರೂ ನೀಡುವ ಮರು ಒಪ್ಪಂದವಾಗಿತ್ತು.
ಸೆಪ್ಟೆಂಬರ್ 19ರಿಂದ ನವೆಂಬರ್ 10ರೊಳಗೆ ಐಪಿಎಲ್ ಅನ್ನು ಯುಎಇನಲ್ಲಿ ಆಯೋಜನೆ ಮಾಡಲಾಗುವುದು ಎಂದು ಕಳೆದ ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದರ ಜತೆಗೆ ಈ ಆವೃತ್ತಿಯಲ್ಲಿ ಎಲ್ಲ ಪ್ರಾಯೋಜಕತ್ವಗಳೂ ಕೂಡಾ ಮುಂದುವರಿಯಲಿವೆ ಎಂದು ತಿಳಿಸಿತ್ತು. ಹೀಗಾಗಿ ಬಿಸಿಸಿಐ ನಿರ್ಧಾರಕ್ಕೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿತ್ತು.