ಮುಂಬೈ: ಭಾರತೀಯ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇದೀಗ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಅಜಿತ್ ಅಗರ್ಕರ್ ಬೆನ್ನಲ್ಲೇ ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಈ ಸ್ಥಾನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಅರ್ಜಿ ಸಲ್ಲಿಕೆ ಮಾಡಲು ನಿನ್ನೆ ಕೊನೆಯ ದಿನವಾಗಿದ್ದ ಕಾರಣ ಕೊನೆ ಘಳಿಗೆಯಲ್ಲಿ ಅಜಿತ್ ಅಗರ್ಕರ್ ಹಾಗೂ ವೆಂಕಟೇಶ್ ಪ್ರಸಾದ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಈ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಭಾರತ ತಂಡದ ಮಾಜಿ ವೇಗದ ಬೌಲರ್ ಆಗಿರುವ ಅಜಿತ್ ಅಗರ್ಕರ್ 16 ಟೆಸ್ಟ್ ಪಂದ್ಯ, 191 ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಭಾಗಿಯಾಗಿದ್ದು, ಏಕದಿನ ಕ್ರಿಕೆಟ್ನಲ್ಲಿ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಬಳಿಕ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ.
ಈ ಹಿಂದೆ ಟೀಂ ಇಂಡಿಯಾ ತಂಡದ ಬೌಲಿಂಗ್ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ ಪ್ರಸಾದ್ ಆಯ್ಕೆಗೊಂಡಿರಲಿಲ್ಲ. ಇದೀಗ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಅರ್ಜಿ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ಪರ ವೆಂಕಟೇಶ್ ಪ್ರಸಾದ್ 33 ಟೆಸ್ಟ್ ಪಂದ್ಯಗಳಿಂದ 96 ವಿಕೆಟ್ ಪಡೆದುಕೊಂಡಿದ್ದು, 161 ಏಕದಿನ ಪಂದ್ಯಗಳಿಂದ 196ವಿಕೆಟ್ ಪಡೆದುಕೊಂಡಿದ್ದಾರೆ.
ಅಗರ್ಕರ್ ಮತ್ತು ವೆಂಕಟೇಶ್ ಪ್ರಸಾದ್ ಅಷ್ಟೇ ಅಲ್ಲದೇ ಶಿವರಾಮಕೃಷ್ಣನ್, ನಯನ್ ಮೊಂಗಿಯಾ, ಚೇತನ್ ಶರ್ಮಾ, ರಾಜೇಶ್ ಚೌಹಾಣ್ ಕೂಡಾ ಅರ್ಜಿ ಸಲ್ಲಿಸಿದ್ದಾರೆ.