ಹೈದರಾಬಾದ್: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಹೀಗಾಗಿ ಕಳೆದ ತಿಂಗಳು ಆರಂಭಗೊಳ್ಳಬೇಕಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
ದೇಶದಲ್ಲಿ ಐಪಿಎಲ್ ನಡೆಸುವುದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಅದು ವಿದೇಶದಲ್ಲಿ ನಡೆದರೆ ತಾನು ಟೂರ್ನಿ ಆಯೋಜನೆ ಮಾಡಲು ಸಿದ್ಧ ಎಂದು ಯುಎಇ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿದೆ.
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಕೊರೊನಾ ಕರಿನೆರಳು ಬಿದ್ದಿರುವ ಕಾರಣ, ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಟೂರ್ನಿ ಆಯೋಜನೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಈ ವೇಳೆ ಐಸಿಸಿ ಟಿ-20 ವಿಶ್ವಕಪ್ ಇರುವುದು ಕೂಡ ಕೆಲವೊಂದು ಗೊಂದಲಗಳಿಗೆ ಎಡೆ ಮಾಡಿದೆ.
ಈ ಹಿಂದೆ ದೇಶದಲ್ಲಿ ಲೋಕಸಭೆ ಚುನಾವಣೆ ನಡೆದ ವೇಳೆ ಯುಎಇನಲ್ಲಿ ಕ್ರಿಕೆಟ್ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಈ ಸಲವೂ ತಾನು ಟೂರ್ನಿ ಆಯೋಜನೆ ಮಾಡಲು ಸಿದ್ಧ ಎಂದು ಹೇಳಿಕೊಂಡಿದೆ.
ಈಗಾಗಲೇ ಶ್ರೀಲಂಕಾ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದು, ಐಪಿಎಲ್ ಲೀಗ್ಗೆ ಆತಿಥ್ಯ ವಹಿಸಲು ತಾವು ಸಿದ್ಧ ಎಂದಿದೆ. ಜೂನ್ 10ರಂದು ಐಸಿಸಿ ಸದಸ್ಯ ರಾಷ್ಟ್ರಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಐಸಿಸಿ ಟಿ-20 ಟೂರ್ನಿ ಆಯೋಜನೆ ಬಗ್ಗೆ ಚರ್ಚೆ ನಡೆಸಲಿದ್ದು, ಒಂದು ವೇಳೆ ಇದು ಮುಂದೂಡಿಕೆಯಾದರೆ ಐಪಿಎಲ್ ಟೂರ್ನಿ ನಡೆಯುವ ಸಾಧ್ಯತೆ ಇದೆ.