ಲಾಹೋರ್(ಪಾಕಿಸ್ತಾನ): ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಕಳೆದ ಮೂರು ತಿಂಗಳಿಂದ ವಿಶ್ವಾದ್ಯಂತ ಯಾವುದೇ ಮಾದರಿಯ ಕ್ರಿಕೆಟ್ ನಡೆದಿಲ್ಲ. ಕ್ರಿಕೆಟ್ ಜನಕ ರಾಷ್ಟ್ರ ಇಂಗ್ಲೆಂಡ್ ದೀರ್ಘಕಾಲದ ವಿರಾಮದ ನಂತರ ಟೆಸ್ಟ್ ಸರಣಿಯನ್ನು ಬಯೋ ಸೆಕ್ಯೂರ್ ತಾಣದಲ್ಲಿ ಆಯೋಜಿಸುತ್ತಿದೆ.
ಜುಲೈ 8ರಿಂದ ಇಂಗ್ಲೆಂಡ್ ಮತ್ತು ವಿಂಡೀಸ್ ತಂಡದ ನಡುವಿನ ಟೆಸ್ಟ್ ಸರಣಿ ಆಯೋಜನೆಗೊಳ್ಳಲಿದೆ. ಈ ಸರಣಿಯ ನಂತರ ಪಾಕಿಸ್ತಾನದ ವಿರುದ್ಧ 3 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಪಿಸಿಬಿ, 29 ಮಂದಿಯ ತಂಡವನ್ನು ಘೋಷಿಸಿದ್ದು, ಈ ತಂಡದಲ್ಲಿ ಪಾಕಿಸ್ತಾನ ಅಂಡರ್- 19 ತಂಡದ ಆಟಗಾರ ಹೈದರ್ ಅಲಿ ಸ್ಥಾನ ಪಡೆದಿದ್ದಾರೆ.
ಹೈದರ್ ಅಲಿ 2019ರ ಸೀಸನ್ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಹಾಗಾಗಿ ಅವರಿಗೆ ಪಿಸಿಬಿ ಅವಕಾಶ ಕಲ್ಪಿಸಿದೆ. ಅಲ್ಲಿದೆ ಅವರು ಪಿಸಿಬಿ ವಾರ್ಷಿಕ ಗುತ್ತಿಗೆಯಲ್ಲೂ ಅವಕಾಶ ಪಡೆದಿದ್ದಾರೆ.
ಹೈದರ್ ಅಲಿ ಕಳೆದ ವರ್ಷ ದಕ್ಷಿಣ ಅಫ್ರಿಕಾ ವಿರುದ್ಧದ ಸರಣಿಯಲ್ಲಿ 317 ರನ್ ಗಳಿಸಿದ್ದರು. ಜೊತೆಗೆ, ಎಸಿಸಿ ಎಮರ್ಜಿಂಗ್ ಕಪ್‌ನಲ್ಲಿ 5ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಈ ವರ್ಷದ ಪಿಎಸ್ಎಲ್ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದ ಈ ಆಟಗಾರ 9 ಪಂದ್ಯಗಳಿಂದ 239 ರನ್ ಸಿಡಿಸಿದ್ದರು.
ಪಾಕಿಸ್ತಾನದ ಯಶಸ್ವಿ ಬೌಲರ್ ಮೊಹಮ್ಮದ್ ಅಮೀರ್ ಹಾಗೂ ಹ್ಯಾರಿಸ್ ಸೋಹೈಲ್ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಅಮೀರ್ ಎರಡನೇ ಮಗುವಿಗೆ ತಂದೆಯಾಗುತ್ತಿರುವುದರಿಂದ ಪ್ರವಾಸದಿಂದ ಹಿಂದೆ ಸರಿದಿದ್ದರೆ, ಸೊಹೈಲ್ ಕೊರೊನಾ ಭೀತಿಯಿಂದ ಟೂರ್ನಿಯಲ್ಲಿ ಪಾಳ್ಗೊಳ್ಳುತ್ತಿಲ್ಲ ಎಂದು ಪಿಸಿಬಿ ಮಾಹಿತಿ ನೀಡಿದೆ.
ತಂಡದೊಂದಿಗೆ ನಾಲ್ಕು ಜನ ರಿಸರ್ವ್ ಆಟಗಾರರನ್ನು ಕೂಡ ಪಿಸಿಬಿ ಕಳುಹಿಸಿದೆ. ಸರಣಿಯ ವೇಳೆ ಆಟಗಾರರು ಕೊರೊನಾ ವೈರಸ್ ಸೋಂಕಿಗೆ ತುತ್ತಾದರೆ ಈ ರಿಸರ್ವ್ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.