ದುಬೈ: ಅಂಡರ್ 19 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಐಪಿಎಲ್ನಲ್ಲಿ ಪದಾರ್ಪಣೆ ಮಾಡಲು ಕಾಯುತ್ತಿರುವ ರವಿ ಬಿಷ್ಣೋಯಿ ಕೋಚ್ ಅನಿಲ್ ಕುಂಬ್ಳೆ ಅವರಿಂದ ಏನೇನು ಕಲಿಯಲು ಸಾಧ್ಯವೋ ಅದನ್ನೆಲ್ಲ ಕಲಿಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಅಂಡರ್ 19 ವಿಶ್ವಕಪ್ ವೇಳೆ ಅದ್ಭುತ ಪ್ರದರ್ಶನ ತೋರಿದ್ದ ಬಿಷ್ಣೋಯಿ ಫೈನಲ್ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಇನ್ನೇನೋ ಪ್ರಶಸ್ತಿ ತಂದುಕೊಡುವವರಿದ್ದರು. ಆದರೆ ಬೇರೆ ಆಟಗಾರರ ಬೆಂಬಲ ಸಿಗದಿದ್ದ ಕಾರಣ ಸ್ವಲ್ಪದರಲ್ಲೇ ಭಾರತಕ್ಕೆ 5ನೇ ವಿಶ್ವಕಪ್ ಕೈತಪ್ಪಿತು.
ಆದರೆ ಟೂರ್ನಿಯಲ್ಲಿ ಬಿಷ್ಣೋಯಿ ಪ್ರದರ್ಶನ ವೀಕ್ಷಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಅವರನ್ನು 2 ಕೋಟಿ ನೀಡಿ ಖರೀದಿಸಿದೆ. ಇದೀಗ ಅವರು ಪಂಜಾಬ್ ತಂಡದ ಕೋಚ್ ಆಗಿರುವ ಲೆಜೆಂಡ್ ಅನಿಲ್ ಕುಂಬ್ಳೆಯಿಂದ ಕಲಿಯಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಅವರು ವಿಶ್ವದ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರು. ಅವರಿಂದ ಮತ್ತು ಅವರ ಅನುಭವಗಳಿಂದ ನಾನು ಸಾಕಷ್ಟ ವಿಚಾರಗಳನ್ನು ಕಲಿಯಲು ಪ್ರಯತ್ನಿಸುತ್ತೇನೆ. ಅದು ಪಂದ್ಯದ ಮನೋಧರ್ಮ, ಕೌಶಲ್ಯಗಳು, ಪರಿಸ್ಥಿತಿಯನ್ನು ನಿಭಾಯಿಸುವ ಕಲೆ, ಅವರು ಫ್ಲಿಫ್ಪರ್ಗಳನ್ನು ಹೇಗೆ ಬೌಲ್ ಮಾಡುತ್ತಿದ್ದರು ಹೀಗೆ ಹಲವಾರು ವಿಚಾರಗಳ ಬಗ್ಗೆ ನಾನು ಕಲಿಯಲು ಪ್ರಯತ್ನಿಸುತ್ತೇನೆ. ಪ್ರಸ್ತುತ ಅದಕ್ಕೆ ಉತ್ತಮ ಅವಕಾಶ ಹಾಗೂ ಸಮಯ ನನಗೆ ಒದಗಿ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಅವರು ತಿಳಿಸಿದ್ದಾರೆ.
ಕುಂಬ್ಳೆ ಸರ್ ನನಗೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಬೌಲ್ ಮಾಡಲು ಹೇಳಿದ್ದಾರೆ ಎಂದು ಅಂಡರ್ 19 ವಿಶ್ವಕಪ್ನಲ್ಲಿ 6 ಪಂದ್ಯಗಳಿಂದ 17 ವಿಕೆಟ್ ಪಡೆದಿರುವ ಬಿಷ್ಣೋಯ್ ಹೇಳಿದ್ದಾರೆ.
ಇನ್ನು ನಾಯಕ ರಾಹುಲ್ ಬಗ್ಗೆ ಮಾತನಾಡಿದ್ದು, ರಾಹುಲ್ ಹೇಗೆ ಉತ್ತಮ ಆಟಗಾರರೊ ಹಾಗೆ ಉತ್ತಮ ಕ್ಯಾಪ್ಟನ್ ಕೂಡ. ಅವರು ನೆಟ್ಸ್ನಲ್ಲಿ ಎಲ್ಲಾ ಆಟಗಾರರ ಬಳಿ ತೆರಳಿ ಮಾತನಾಡುತ್ತಾರೆ ಮತ್ತು ತಮ್ಮ ಅನುಭವವನ್ನು ಶೇರ್ ಮಾಡುತ್ತಾರೆ. ಅವರ ಜೊತೆ ಮಾತನಾಡುವುದಕ್ಕೆ ತುಂಬಾ ಖುಷಿಯಾಗುತ್ತದೆ ಹಾಗೂ ಅವರ ನಾಯಕತ್ವದಲ್ಲಿ ಆಡುವುದಕ್ಕೆ ನನಗೆ ಉತ್ಸುಕನಾಗಿದ್ದೇನೆ ಎಂದು ಹೇಳಿರುವ ಅವರು ಈ ವರ್ಷ ಪ್ರಶಸ್ತಿ ಎತ್ತಿ ಹಿಡಿಯುವ ತಂಡಗಳಲ್ಲಿ ಪಂಜಾಬ್ ಕೂಡ ಒಂದು ಪ್ರತಿಸ್ಪರ್ಧಿ ಎಂದಿದ್ದಾರೆ.
ಸೆಪ್ಟೆಂಬರ್ 19 ರಿಂದ ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಚೆನ್ನೈ ಸೆಣಸಾಡಲಿವೆ. ಪಂಜಾಬ್ ತಂಡ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಎದುರಿಸಲಿದೆ.