ಮೆಲ್ಬೋರ್ನ್: 2008ರ ಟೆಸ್ಟ್ ಸರಣಿಯ ವೇಳೆ ಭಾರತ ತಂಡದ ವಿ.ವಿ.ಎಸ್ ಲಕ್ಷ್ಮಣ್ ಅವರ ಕ್ಯಾಚ್ ಬಿಟ್ಟ ನಂತರ ತಾವು ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾಗಿ ಆಸೀಸ್ ಮಾಜಿ ವಿಕೆಟ್ ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.
ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ ಲಕ್ಷ್ಮಣ್ ಕ್ಯಾಚ್ ಕೈಚೆಲ್ಲಿದ ನಂತರ ತಮ್ಮ ನಿವೃತ್ತಿಗೆ ಇದು ಸಕಾಲ ಎಂದು ಭಾವಿಸಿದ್ದಾಗಿ ಅವರು ಹೇಳಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ಲಕ್ಷ್ಮಣ್ ಅವರಂಥ ಬ್ಯಾಟ್ಸ್ಮನ್ ಕ್ಯಾಚ್ ಕೈಚೆಲ್ಲಿದ್ದು ನನಗೆ ನಿವೃತ್ತಿ ಹೊಂದಲು ಒಳ್ಳೆಯ ಕಾರಣವೆನ್ನಿಸಿತ್ತು. ಏಕೆಂದರೆ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ನಾನು ಬಯಸುವುದಿಲ್ಲ ಎಂದು ಗಿಲ್ಲಿ ತಿಳಿಸಿದರು.
ಉತ್ತಮ ಫಾರ್ಮ್ನಲ್ಲಿದ್ದಾಗಲೇ ಕ್ರಿಕೆಟ್ನಿಂದ ನಿವೃತ್ತಿಯಾಗಬೇಕೆಂದು ಬಯಸಿದ್ದಾಗಿಯೂ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಲಕ್ಷ್ಮಣ್ ಹಾಗೂ ಹರ್ಭಜನ್ ಸಿಂಗ್ ಅವರನ್ನು ಮೆಚ್ಚಿಕೊಂಡಿದ್ದಾರೆ.
'ಲಕ್ಷ್ಮಣ್ ಭಾರತದ ಬ್ಯಾಟಿಂಗ್ ಕ್ರಮಾಂಕದ ಜೊತೆ ಸೇರಿ ನಮ್ಮ ತಂಡವನ್ನು ಉರುಳಿಸುತ್ತಿದ್ದರು. ನಂತರ ಹರ್ಭಜನ್ ಸಿಂಗ್ ಬೌಲಿಂಗ್ ಮೂಲಕ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದರು' ಎಂದಿದ್ದಾರೆ.
ಆಸ್ಟ್ರೇಲಿಯಾ ಪರ ಆ್ಯಡಮ್ ಗಿಲ್‌ಕ್ರಿಸ್ಟ್ 96 ಟೆಸ್ಟ್, 287 ಏಕದಿನ ಪಂದ್ಯಗಳಿಂದ ಒಟ್ಟು 905 ಬಲಿ ಪಡೆದಿದ್ದಾರೆ. ಇದರಲ್ಲಿ 92 ಸ್ಟಂಪಿಂಗ್ ಹಾಗೂ 813 ಕ್ಯಾಚ್ ಸೇರಿವೆ.
96 ಟೆಸ್ಟ್ ಪಂದ್ಯಗಳಿಂದ 5,570 ರನ್, 287 ಏಕದಿನ ಪಂದ್ಯಗಳಿಂದ 9,619 ಹಾಗೂ 13 ಟಿ20 ಪಂದ್ಯಗಳಲ್ಲಿ 272 ರನ್ ಸಾಧನೆ ಮಾಡಿದ್ದಾರೆ.