ಚೆನ್ನೈ: ಆಸ್ಟ್ರೇಲಿಯಾ ಟೆಸ್ಟ್ನಲ್ಲಿ ಜಯಸಾಧಿಸಿರುವ ಟೀಂ ಇಂಡಿಯಾ ಮತ್ತೊಂದು ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಫೆಬ್ರವರಿ 5 ರಿಂದ ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಆಟಗಾರರು ಭಾರತಕ್ಕೆ ಆಗಮಿಸಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಗ್ಲೆಂಡ್ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಸಲಾಯಿತು. ಆಟಗಾರರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆ ನಡೆಸಿದರು.

ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿ ಮೂಲಕ ಭಾರತ ತಂಡಕ್ಕೆ ವಾಪಸ್ ಆಗಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸಲುವಾಗಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದ ಕೊಹ್ಲಿ, ನಂತರ 3 ಪಂದ್ಯಗಳಿಗೆ ಅಲಭ್ಯರಾಗಿದ್ದರು.
ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ನಾಲ್ಕು ಪಂದ್ಯಗಳು ನಡೆಯಲಿವೆ. ಹೀಗಾಗಿ ಬಿಸಿಸಿಐ ಈಗಾಗಲೇ 18 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ.