ಮುಂಬೈ: 2015 ವಿಶ್ವಕಪ್ನಂತರ ಭಾರತ ತಂಡ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನಿಗಾಗಿ ಆಯ್ಕೆ ಸಮಿತಿ ತುಂಬಾ ಪ್ರಯೋಗ ಮಾಡಿತ್ತು. ಆದರೆ ನಾಲ್ಕು ವರ್ಷಗಳಲ್ಲೂ ಯಾವುದೇ ಒಬ್ಬ ಖಾಯಂ ಆಟಗಾರ ಭಾರತ ತಂಡಕ್ಕೆ ಸಿಕ್ಕಿರಲಿಲ್ಲ. ಆದರೆ ಮುಂಬೈನ ಶ್ರೇಯಸ್ ಅಯ್ಯರ್ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ನಾಲ್ಕನೆ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಭಾರತ ತಂಡವನ್ನು ಸಂಪೂರ್ಣವಾಗಿಸಿದ್ದಾರೆ.
ಇನ್ಸ್ಟಾಗ್ರಾಂ ಲೈವ್ನಲ್ಲಿ ಮಾತನಾಡಿರುವ ಅವರು, ಟೀಮ್ ಇಂಡಿಯಾದಲ್ಲಿ ಬ್ಯಾಟಿಂಗ್ ಲೈನ್‌ಅಪ್ ತುಂಬಾ ಬಲಿಷ್ಠವಾಗಿದೆ. ಆದರೆ, ಕಳೆದ ಕೆಲ ವರ್ಷಗಳಲ್ಲಿ ನಾಲ್ಕನೇ ಕ್ರಮಾಂಕದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿತ್ತು. ಆದರೆ, ಕಳೆದ ವರ್ಷ ತಾವೂ ನೀಡಿರುವ ಪ್ರದರ್ಶನ ನೋಡಿದ ಮೇಲೆ ಆ ರೀತಿಯ ಪ್ರಶ್ನೆ ಬರಬಾರದು ಎಂದು ಶ್ರೇಯಸ್ ಹೇಳಿಕೊಂಡಿದ್ದಾರೆ.
2015ರ ವಿಶ್ವಕಪ್ ಬಳಿಕ ರಾಯುಡು ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಉತ್ತಮ ಆಟಗಾರ ಎಂದು ಅವಕಾಶ ಕೊಡಲಾಗಿತ್ತು. ಅವರೂ ಕೂಡ ಒಂದೆರಡು ವರ್ಷ ಉತ್ತಮ ಪ್ರದರ್ಶನ ತೋರಿದ್ದರು. ಆದರೆ, ವಿಶ್ವಕಪ್ ಹತ್ತಿರ ಬರುತ್ತಿದ್ದಂತೆ ಕಳಪೆ ಪ್ರದರ್ಶನ ತೋರಿದ್ದರಿಂದ ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿರಲಿಲ. ಆದರೆ, ಅವರ ಬದಲಿಗೆ ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆಯ್ಕೆ ಸಮಿತಿಯ ಈ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಚರ್ಚೆಗೀಡು ಮಾಡಿತ್ತು.
ಇನ್ನು ವಿಶ್ವಕಪ್ನಲ್ಲಿ ವಿಜಯ್ ಶಂಕರ್ ವಿಫಲರಾದರು. ಸೆಮಿ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸೋತು ಹೊರಬಿದ್ದಿತ್ತು. ಈ ಆಘಾತಕಾರಿ ಸೋಲಿನ ಬಳಿಕ ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಆಯ್ಕೆ ಮಾಡಲಾಯಿತು. ಅಲ್ಲಿಂದ ಅವರು ಉತ್ತಮ ಪ್ರದರ್ಶನ ನೀಡಲು ಆರಂಭಿಸಿದ್ದಾರೆ. ಇದೀಗ ಅವರು ಸೀಮಿತ ಓವರ್ಗಳಲ್ಲಿ ಖಾಯಂ ಸದಸ್ಯರಾಗಿದ್ದಾರೆ.
ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ಶ್ರೇಯಸ್, ನಾನು ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದೇನೆ. ಹೀಗಾಗಿ ಏಕದಿನ ಮಾದರಿಯಲ್ಲಿ ಇನ್ನು ಮುಂದೆ ನಾಲ್ಕನೇ ಕ್ರಮಾಂಕದ ಕುರಿತು ಯಾವುದೇ ಗೊಂದಲ ಅಥವಾ ಪ್ರಶ್ನೆಯನ್ನು ಕೇಳಲು ನಾನು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಕುರಿತು ನಾನು ಈಗಾಗಲೇ ಹಲವಾರು ಸಂದರ್ಶನಗಳಲ್ಲಿ ಹೇಳಿದ್ದೇನೆ. ಇನ್ನು ಮುಂದೆ ನಾಲ್ಕನೇ ಕ್ರಮಾಂಕದ ಬಗ್ಗೆ ಪ್ರಶ್ನೆಗಳನ್ನು ಕೇಳಬಾರದು. ಯಾರಾದರೂ ಒಂದು ಕ್ರಮಾಂಕದಲ್ಲಿ ವರ್ಷಗಳ ಕಾಲ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದರೆ ಆ ಬ್ಯಾಟ್ಸ್ಮನ್ ಆ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾನೆ ಎಂದರ್ಥ. ನಾಲ್ಕನೇ ಕ್ರಮಾಂಕವನ್ನು ನಾನು ಭದ್ರಪಡಿಸಿಕೊಂಡಿರುವುದಕ್ಕೆ ನನಗೆ ತೃಪ್ತಿಯಿದೆ ಎಂದು ಹೇಳಿಕೊಂಡಿದ್ದಾರೆ.