ಬೆಂಗಳೂರು: ಬಿಸಿಸಿಐ ಪಿಚ್ ಕ್ಯುರೇಟರ್ ಹಾಗೂ ಕರ್ನಾಟಕದ ಮಾಜಿ ಕ್ರಿಕೆಟ್ ಆಟಗಾರ ಗೋಪಾಲಸ್ವಾಮಿ ಕಸ್ತೂರಿ ರಂಗನ್ (89) ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಸಂತಾಪ ಸೂಚಿಸಿದೆ.
ನಗರದ ಚಾಮರಾಜಪೇಟೆಯ ತಮ್ಮ ನಿವಾಸದಲ್ಲಿ ಕಸ್ತೂರಿ ರಂಗನ್ ಅವರು ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳಿದಿದ್ದಾರೆ.
ಕಸ್ತೂರಿ ರಂಗನ್ 1948 ರಿಂದ 1963ರವರೆಗೆ ರಣಜಿ ಟ್ರೋಫಿಯಲ್ಲಿ ಕರ್ನಾಟಕದ (ಅಂದಿನ ಮೈಸೂರು) ಪರ ಆಡಿದ್ದರು. ಬಲಗೈ ಬೌಲರ್ ಆಗಿದ್ದ ಅವರು, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 36 ಪಂದ್ಯಗಳಲ್ಲಿ 421 ರನ್ ಹಾಗೂ 94 ವಿಕೆಟ್ ಕಬಳಿಸಿದ್ದಾರೆ.
ಅಲ್ಲದೆ 1951-52 ಸಾಲಿನ ರಣಜಿಯಲ್ಲಿ 12 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದ ಕಸ್ತೂರಿ ರಂಗನ್ ಅವರಿಗೆ, 1952-53 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾಗುವ ಮೂಲಕ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದರು. ಇದಲ್ಲದೆ ಕಸ್ತೂರಿ ರಂಗನ್ ಅವರು ಕೆಎಸ್ಸಿಎ ಉಪಾಧ್ಯಕ್ಷ ಹಾಗೂ ಪಿಚ್ ಕ್ಯುರೇಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.