ನವದೆಹಲಿ: ಟೀಂ ಇಂಡಿಯಾ ಯಶಸ್ವಿ ಮಾಜಿ ನಾಯಕ, ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಇತ್ತೀಚೆಗೆ ಗುಡ್‌ಬೈ ಹೇಳಿದ್ದಾರೆ. ಅವರು ನಿವೃತ್ತಿಯ ವಿಚಾರವನ್ನು ತಿಳಿಸುತ್ತಿದ್ದಂತೆ ಕ್ರಿಕೆಟರುಗಳು, ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗು ಅಪಾರ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಮಾಹಿಗೆ ಪತ್ರ ಬರೆದಿದ್ದಾರೆ.
'ಡಿಯರ್ ಮಹೇಂದ್ರ, ಆಗಸ್ಟ್ 15ರಂದು ನೀವು ವಿಶೇಷ ಶೈಲಿಯಲ್ಲಿ ಇಡೀ ರಾಷ್ಟ್ರದ ಜನರು ಭಾವೋದ್ರೇಕವಾಗುವಂತೆ ವಿಡಿಯೋ ಶೇರ್ ಮಾಡಿದ್ದೀರಿ. 130 ಕೋಟಿ ಭಾರತೀಯರು ನಿಮ್ಮ ನಿರ್ಧಾರದಿಂದ ನಿರಾಶೆಗೊಂಡಿದ್ದಾರೆ. ಆದರೆ ಭಾರತೀಯ ಕ್ರಿಕೆಟ್‌ಗಾಗಿ ನೀವು ಮಾಡಿರುವ ಸಾಧನೆಗೆ ಎಲ್ಲರೂ ಕೃತಜ್ಞರಾಗಿರುತ್ತಾರೆ.
ಇದನ್ನೂ ಓದಿ: ನಿವೃತ್ತಿ ಹಿಂಪಡೆದು, 2021ರ ಟಿ-20 ವಿಶ್ವಕಪ್ ಆಡುವಂತೆ ಧೋನಿಗೆ ಮೋದಿ ಮನವಿ ಮಾಡ್ಬಹುದು: ಅಖ್ತರ್!
ನಿಮ್ಮ ಹೆಸರು ಇತಿಹಾಸದ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಓರ್ವ ಅದ್ಭುತ ನಾಯಕ, ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ಆಗಿ ನಿಮ್ಮ ಸಾಧನೆ ಎಲ್ಲರೂ ಮೆಚ್ಚುವಂಥದ್ದು. 2011 ವಿಶ್ವಕಪ್ ಫೈನಲ್ನಲ್ಲಿ ನಿಮ್ಮ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿತ್ತು.
ಸಣ್ಣ ಹಳ್ಳಿಯಿಂದ ಬಂದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವುದರ ಜತೆಗೆ ಭಾರತ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ. 2007ರ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತೋರಿರುವ ಪ್ರದರ್ಶನ ಹೆಮ್ಮೆ ತರುವಂಥದ್ದು. ಈ ಸಮಯದಲ್ಲಿ ಸಾಕ್ಷಿ ಹಾಗೂ ಮಗಳು ಜೀವಾ ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದಾರೆ ಎಂಬ ವಿಶ್ವಾಸವಿದೆ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ' ಎಂದು ಮೋದಿ ಹಾರೈಸಿದ್ದಾರೆ.