ನವದೆಹಲಿ: ಟೆಸ್ಟ್ ಕ್ರಿಕೆಟ್ನಿಂದ ಗಾಯದ ಸಮಸ್ಯೆ ಬಗ್ಗೆ ಎಚ್ಚರ ವಹಿಸಿರುವ ಟೀಂ ಇಂಡಿಯಾ ಆಲ್‌ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ, ಏಕದಿನ ಕ್ರಿಕೆಟ್ನಲ್ಲಿ ತಮ್ಮ ಪ್ರಾಮುಖ್ಯತೆ ಬಗ್ಗೆ ಅರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿರುವ ಪಾಂಡ್ಯ, ಸೆಪ್ಟೆಂಬರ್ 2018ರಿಂದ ಟೆಸ್ಟ್ ಕ್ರಿಕೆಟ್ ಆಡಿಲ್ಲ. ಆದರೆ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಉತ್ತಮ ಆಲ್‌ರೌಂಡರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಪ್ರಸ್ತುತ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ ಟೆಸ್ಟ್ ಕ್ರಿಕೆಟ್ ಆಡುವುದು ಒಂದು ಸವಾಲಾಗಿದೆ. ನಾನು ಟೆಸ್ಟ್ ಆಟಗಾರನಾದರೆ ಏಕದಿನ ಮತ್ತು ಟಿ-20 ಪಂದ್ಯವಾಡಲು ಸಾಧ್ಯವಾಗುವುದಿಲ್ಲ. ವೈಟ್ ಬಾಲ್ ಕ್ರಿಕೆಟ್ನಲ್ಲಿ ನನ್ನ ಪ್ರಾಮುಖ್ಯತೆ ಬಗ್ಗೆ ನನಗೆ ತಿಳಿದಿದೆ. ನಾನು ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ಏಕದಿನ ಮತ್ತು ಟಿ-20ಗಳಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
2018ರಲ್ಲಿ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಮೊದಲು ಬೆನ್ನು ನೋವಿಗೆ ತುತ್ತಾಗಿದ್ದರು. ಈ ಬಗ್ಗೆ ಮಾತನಾಡಿರುವ ಪಾಂಡ್ಯ, ನೋವು ಕಾಣಿಸಿಕೊಂಡು ಹಲವು ಸಮಯ ಕಳೆದರೂ ಕಡಿಮೆ ಆಗಲಿಲ್ಲ. 10 ನಿಮಿಷಗಳ ನಂತರ ನನ್ನನ್ನು ಪಂದ್ಯದಿಂದ ಕೈಬಿಡಲಾಯ್ತು. ಇಲ್ಲಿಗೆ ನನ್ನ ಕ್ರಿಕೆಟ್ ವೃತ್ತಿ ಜೀವನ ಮುಗಿಯಿತು ಎಂದೇ ಭಾವಿಸಿದ್ದೆ ಎಂದು ಹಳೆಯ ನೆನಪನ್ನು ಬಿಚ್ಚಿಟ್ಟಿದ್ದಾರೆ.