ಇಸ್ಲಮಾಬಾದ್: ಸುಮಾರು ಒಂದು ದಶಕಗಳ ನಂತರ ಪಾಕಿಸ್ತಾನ ತಂಡ ಟಾಪ್ ತಂಡಗಳಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆತಿಥ್ಯ ನೀಡಲು ಸಜ್ಜಾಗುತ್ತಿದೆ. 2009ರ ಉಗ್ರರ ದಾಳಿ ನಂತರ ಇದೇ ಮೊದಲ ಬಾರಿಗೆ ಮಂಚೂಣಿ ಕ್ರಿಕೆಟ್ ರಾಷ್ಟ್ರಗಳಾದ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಗಳನ್ನಾಡಲಿದೆ.
"ನಾವು ಇತರೆ ಕ್ರಿಕೆಟ್ ಮಂಡಳಿಗಳೊಂದಿಗೆ ಸಂಬಂಧಗಳನ್ನು ಪೋಷಿಸುತ್ತಿದ್ದೇವೆ ಮತ್ತು ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಭಾರೀ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದೇವೆ"ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸಿಮ್ ಖಾನ್ ಹೇಳಿದ್ದಾರೆ.
"ಮುಂದಿನ ವರ್ಷದ 10 ತಿಂಗಳವರೆಗೆ ಹಲವು ಸರಣಿಗಳನ್ನು ಆಡಲಿದ್ದೇವೆ. ದ.ಆಫ್ರಿಕಾ, ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿವೆ. ನಾವು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಜೊತೆಗೂ ಮಾತುಕತೆ ನಡೆಸಿದ್ದೇವೆ. ಅವರೂ ಕೂಡ 2022ರ ಆವೃತ್ತಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ" ಎಂದು ಖಾನ್ ವಿವರಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಜನವರಿಯಲ್ಲಿ ಪಾಕಿಸ್ತಾನದಲ್ಲಿ ವಿಶ್ವಚಾಂಪಿಯನ್ಶಿಪ್ ಭಾಗವಾಗಿ 2 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಟಿ-20 ಪಂದ್ಯಗಳನ್ನಾಡಲಿದೆ.
ನಂತರ ನ್ಯೂಜಿಲ್ಯಾಂಡ್ ವಿರುದ್ಧ ಸೆಪ್ಟೆಂಬರ್ನಲ್ಲಿ 3 ಏಕದಿನ ಪಂದ್ಯಗಳ ಸರಣಿ ಮತ್ತು 2 ಟಿ-20 ಪಂದ್ಯಗಳನ್ನಾಡಲಿದೆ. ನಂತರ ಇಂಗ್ಲೆಂಡ್ ವಿರುದ್ಧ ಕರಾಚಿಯಲ್ಲಿ 2 ಟಿ-20 ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್ ತಂಡ 2005ರ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿದೆ. ಜೊತೆಗೆ ಪಿಸಿಬಿ ಡಿಸೆಂಬರ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರು ಸರಣಿಯೊಂದನ್ನು ಆಯೋಜಿಸಲು ಯೋಜನೆ ರೂಪಿಸುತ್ತಿದೆ.
2009ರ ಮಾರ್ಚ್ನಲ್ಲಿ ಶ್ರೀಲಂಕಾ ತಂಡದ ಬಸ್ ಭಯೋತ್ಪಾದಕ ದಾಳಿಗೆ ಒಳಗಾಗಿತ್ತು. ಈ ಘಟನೆಯಲ್ಲಿ 6 ಪೊಲೀಸರು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಈ ಘಟನೆ ನಂತರ ಯಾವ ತಂಡಗಳೂ ಪಾಕಿಸ್ತಾನ ಪ್ರವಾಸ ಕೈಗೊಂಡಿರಲಿಲ್ಲ. 2015ರಲ್ಲಿ ಜಿಂಬಾಬ್ವೆ ತಂಡ ಮೊದಲ ಟೆಸ್ಟ್ ಆಡುವ ರಾಷ್ಟ್ರವಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆದಾದ ನಂತರ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದವು.