ಲಾಹೋರ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್‌ಗಳ ಪ್ರದರ್ಶನದಿಂದ ಬೇಸತ್ತಿರುವ ಮಾಜಿ ವೇಗದ ಬೌಲರ್ ಶೋಯಬ್ ಅಕ್ತರ್ ಪಾಕಿಸ್ತಾನ ತಂಡವನ್ನು ಕ್ಲಬ್ ತಂಡಕ್ಕೆ ಹೋಲಿಸಿದ್ದಾರೆ.
ಸೌತಾಂಪ್ಟನ್ನ ಏಜಸ್ ಬೌಲ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಬೌಲರ್‌ಗಳ ಪ್ರದರ್ಶನ ಅಖ್ತರ್ ಅವರ ಕೋಪಕ್ಕೆ ಕಾರಣವಾಗಿದೆ.
ಪಾಕಿಸ್ತಾನ ತಂಡ ಮೊದಲ ದಿನದ ಮೊದಲೆರಡು ಸೆಷನ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತ್ತು. ಆದರೆ ಜಾಕ್ ಕ್ರಾಲೆ(267) ಹಾಗೂ ಜೋಸ್ ಬಟ್ಲರ್(152) 359 ರನ್ಗಳ ಬೃಹತ್ ಜೊತೆಯಾಟ ನಡೆಸಿ ಇಂಗ್ಲೆಂಡ್ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
"ನಾನು ಆಕ್ರಮಣಕಾರಿ ಬೌಲರ್‌ಗಳ ಮನೋಭಾವವನ್ನು ನೋಡಿದ್ದೇನೆ. ಅವರು ವಿಕೆಟ್ ತೆಗೆದುಕೊಳ್ಳಲು ಕಾತರರಾಗಿರುತ್ತಾರೆ. ಪಾಕಿಸ್ತಾನದ ಪ್ರಸ್ತುತ ಬೌಲರ್‌ಗಳಿಗೆ ಏನು ಕಷ್ಟವಾಗುತ್ತಿದೆಯೋ ನನಗೆ ತಿಳಿದಿಲ್ಲ. ಬೌಲಿಂಗ್ನಲ್ಲಿ ಯಾವುದೇ ವಿಧಾನವಿಲ್ಲ. ನಸೀಮ್ ಷಾ ಕೇವಲ ಒಂದು ಏರಿಯಾದಲ್ಲೇ ಬೌಲಿಂಗ್ ಮಾಡುತ್ತಿದ್ದಾರೆ. ಅವರ ಬೌಲಿಂಗ್ನಲ್ಲಿ ಸ್ಲೋ ಬಾಲ್ಗಳಿಲ್ಲ, ಬೌನ್ಸರ್ ಕಂಡುಬರುತ್ತಿಲ್ಲ" ಎಂದು ಅಖ್ತರ್ ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ.
"ಆಕ್ರಮಣಶೀಲತೆಯ ಕೊರತೆ ಏಕೆ ಆಗುತ್ತಿದೆ? ಎಂದು ನನಗೆ ತಿಳಿಯುತ್ತಿಲ್ಲ. ನಾವು ನೆಟ್ ಬೌಲರ್‌ಗಳು ಅಲ್ಲ, ಉತ್ತಮ ಮನಸ್ಥಿತಿಯಿಲ್ಲವೆಂದರೆ ಯಶಸ್ವಿಯಾಗಲು ಸಾಧ್ಯವಿಲ್ಲ. ಪಾಕಿಸ್ತಾನ ತಂಡ ಸಾಮಾನ್ಯ ಕ್ಲಬ್ ತಂಡದಂತೆ ಕಾಣುತ್ತಿದೆ. ಈ ಪಂದ್ಯದ ಪ್ರದರ್ಶನ ನೋಡುತ್ತಿದ್ದರೆ 2006ರ ಬಳಿಕ ಪಾಕಿಸ್ತಾನ ತಂಡ ವಿದೇಶದಲ್ಲಿ ಅತಿ ದಾರುಣ ಸೋಲು ಕಾಣುವ ಸಾಧ್ಯತೆಯಿದೆ" ಎಂದು ಶೋಯೆಬ್ ಅಖ್ತರ್ ಕಿಡಿ ಕಾರಿದ್ದಾರೆ.
ಇನ್ನು ಎರಡನೇ ದಿನದ ಕೊನೆಯಲ್ಲಿ ತಂಡದ ಆಡಳಿತ ಮಂಡಳಿ ನೈಟ್ ವಾಚ್ಮನ್ ಬದಲು ಬಾಬರ್ ಅವರನ್ನು ಕಳುಹಿಸಿದ್ದನ್ನು ಅವರು ಪ್ರಶ್ನಿಸಿದ್ದಾರೆ.