ಕರಾಚಿ : ಪಾಕಿಸ್ತಾನದಲ್ಲಿ ಶಂಕಿತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ಮುಂದೂಡಲಾಗಿದೆ.
ಪಿಎಸ್ಎಲ್ನ ಲೀಗ್ ಹಂತದ ಪಂದ್ಯಗಳು ಮುಗಿದು, ಮಂಗಳವಾರದಿಂದ ಸೆಮಿಫೈನಲ್ ಹಂತದ ಪಂದ್ಯಗಳು ಆರಂಭವಾಗಬೇಕಿತ್ತು, ಆದರೆ, ಕೋವಿಡ್-19 ಭಯ ಹೆಚ್ಚಾಗಿದ್ದರಿಂದ ಪಿಎಸ್ಎಲ್ನ ಉಳಿದ ಪಂದ್ಯಗಳನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಂದೂಡಿದೆ.
'ಪಿಎಸ್ಎಲ್ 2020 ಮಂದೂಡಲಾಗಿದ್ದು, ಮುಂದಿನ ದಿನಾಂಕವನ್ನುಮುಂದಿನ ದಿನಗಳಲ್ಲಿ ಮರುನಿಗದಿ ಮಾಡಲಾಗುವುದು. ಬರುವ ದಿನಗಳಲ್ಲಿ ಮತ್ತಷ್ಟು ವಿವರ ನೀಡಲಿದ್ದೇವೆ' ಎಂದು ಪಿಸಿಬಿ ಟ್ವೀಟ್ ಮಾಡಿದೆ.
ಮುಂದಿನ ತಿಂಗಳು ನಿಗದಿಯಾಗಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಸಹ ಪಿಸಿಬಿ ಮುಂದೂಡಿದೆ. ಕೊವಿಡ್ ಭೀತಿಯಿಂದ ಹಲವಾರು ವಿದೇಶಿ ಆಟಗಾರರು ಪಿಎಸ್ಎಲ್ನಲ್ಲಿ ಆಟವಾಡಲು ನಿರಾಕರಿಸಿ ತವರಿಗೆ ಮರಳಿದ್ದಾರೆ.