ಲಂಡನ್: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತಿ ಹೆಚ್ಚು ಗೊಂದಲಕ್ಕೆ ಒಳಗಾದ ಓವರ್ ಥ್ರೋ ಹಾಗೂ ಬೌಂಡರಿ ಲೆಕ್ಕಾಚಾರ ನಿಯಮ ಕುರಿತು ಪರಿಶೀಲಿಸಲು ಸೆಪ್ಟೆಂಬರ್ನಲ್ಲಿ ಎಂಸಿಸಿ ಸಬ್ ಕಮಿಟಿ ನಿರ್ಧರಿಸಿದೆ.
ಫೈನಲ್ ಪಂದ್ಯದಲ್ಲಿ ಬೆನ್ಸ್ಟೋಕ್ಸ್ ಬಾರಿಸಿದ ಚೆಂಡು ಗಪ್ಟಿಲ್ ಕೈಸೇರಿತ್ತು. ಅವರು ಥ್ರೋ ಮಾಡಿದ ಬಾಲ್ ಕ್ರೀಸ್ ಮುಟ್ಟಲು ಡೈವ್ ಮಾಡಿದ್ದ ಸ್ಟೋಕ್ಸ್ ಬ್ಯಾಟಿಗೆ ತಗುಲಿ ಬೌಂಡರಿ ಸೇರಿತ್ತು. ಇದನ್ನು ಗಮನಿಸಿದ ಶ್ರೀಲಂಕಾದ ಅಂಪೈರ್ ಕುಮಾರ್ ಧರ್ಮಸೇನಾ 6 ರನ್ ನೀಡಿದರು. ಇದು ಕಿವೀಸ್ ತಂಡದ ಸೋಲಿಗೆ ಕಾರಣವಾಗಿತ್ತು. ಈ ಘಟನೆ ವಿಶ್ವ ಕ್ರಿಕೆಟ್ನಲ್ಲಿ ಭಾರಿ ಚರ್ಚೆಗೀಡಾಗಿತ್ತು.
ಐಸಿಸಿ ಕ್ರಿಕೆಟ್ 19.8 ನಿಯಮದ ಪ್ರಕಾರ ಓವರ್ ಥ್ರೋ ಎಂದು ಪರಿಗಣಿಸಿದ್ದು ಸರಿಯಾಗಿತ್ತು. ಆದರೆ, ಹೆಚ್ಚು ಚರ್ಚೆಯಾಗಿದ್ದ ಆ ನಿಯಮವನ್ನು ಪುನರ್ ಪರೀಶಿಲನೆ ಮಾಡುವ ಅಗತ್ಯವಿದ್ದು, ಸೆಪ್ಟೆಂಬರ್ನಲ್ಲಿ ಈ ನಿಯಮ ಕುರಿತು ಐಸಿಸಿಯಿಂದ ರಚಿತವಾಗಿರುವ ಸಮಿತಿಯಲ್ಲಿ ಚರ್ಚಿಸಲಾಗುತ್ತದೆ ಎಂದು ಎಂಸಿಸಿ ತಿಳಿಸಿದೆ.
ಫೈನಲ್ ಪಂದ್ಯದಲ್ಲಿ ಕುಮಾರ ಧರ್ಮಸೇನಾ ಓವರ್ ಥ್ರೋನಲ್ಲಿ 6 ರನ್ ನೀಡಿದ್ದನ್ನು ಖಂಡಿಸಿದ್ದ ಮಾಜಿ ಅಂಪೈರ್ ಸೈಮನ್ ಟಫಲ್ ಸ್ಟೋಕ್ಸ್ ಬ್ಯಾಟ್ಗೆ ಬಾಲ್ ಬಡಿದಾಗ ಇನ್ನು ಅವರು ಕ್ರೀಸ್ ಮುಟ್ಟಿಲ್ಲವಾದ್ದರಿಂದ 5 ರನ್ ಕೊಡಬೇಕಿತ್ತು ಎಂದು ತಿಳಿಸಿದ್ದರು. ಈ ವಿಚಾರವೇ ಇದೀಗ ನಿಯಮವನ್ನು ಪರಿಶೀಲನೆ ಮಾಡುವಂತೆ ಮಾಡಿದೆ.