ನವದೆಹಲಿ: ಭಾರತೀಯ ಶಶಾಂಕ ಮನೋಹರ್ ಅವರಿಂದ ತೆರವಾಗಿರುವ ಐಸಿಸಿ ಮುಖ್ಯಸ್ಥರನ್ನು ನಿರ್ಧರಿಸುವ ಸಭೆಯಲ್ಲಿ ಸದಸ್ಯರಿಂದ ಒಮ್ಮತದ ಅಭಿಪ್ರಾಯ ವ್ಯಕ್ತವಾಗದ ಹಿನ್ನಲೆ ಸೋಮವಾರ ನಡೆದ ಸಭೆ ಗೊಂದಲದಲ್ಲೇ ಅಂತ್ಯಗೊಂಡಿದೆ.
ಐಸಿಸಿ ಮುಖ್ಯಸ್ಥರ ಸ್ಥಾನಕ್ಕೆ ಆಯ್ಕೆ ಮಾಡುವ ವಿಚಾರವಾಗಿ ನಡೆದ ಸಭೆಯಲ್ಲಿ ನಾಮ ನಿರ್ದೇಶನ ಪ್ರಕ್ರಿಯೆಯನ್ನು ಮಾತ್ರ ಆಂತಿಮಗೊಳಿಸಲಾಯಿತು. ಆದರೆ ಸಭೆಯಲ್ಲಿ ಮುಖ್ಯಸ್ಥರ ಅವಿರೋಧ ಆಯ್ಕೆಗೆ ಸದಸ್ಯರಿಂದ ಒಮ್ಮತದ ಅಭಿಪ್ರಾಯ ವ್ಯಕ್ತವಾಗಲಿಲ್ಲ.

ಹಲವಾರು ವಿಷಯಗಳ ಬಗ್ಗೆ ಸದಸ್ಯರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಮೊದಲನೆಯಾದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆ ಸರಳ ಬಹುಮತ ಅಥವಾ ಮೂರನೇ ಎರಡರಷ್ಟು ಬಹುಮತ ಇರಬೇಕೇ ಎಂಬುದರ ಬಗ್ಗೆ ಇನ್ನೂ ಗೊಂದಲವಿದೆ ಎಂದು ಐಸಿಸಿ ಸದಸ್ಯರೊಬ್ಬರು ಪ್ರಮುಖ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಅಧ್ಯಕ್ಷ ಹುದ್ದೆಗೆ ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ಎಲ್ಲರೂ ಒಪ್ಪಿಕೊಳ್ಳುವ ವ್ಯಕ್ತಿಯ ಕೊರತೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೆಸರು ಕೇಳಿಬರುತ್ತಿದೆಯಾದರೂ, ಅದರ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ.
ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಎನ್ಶಾನ್ ಮಣಿ ಕೂಡ ತನಗೆ ದೇಶದ ಪ್ರಧಾನಿ ಪಿಸಿಬಿಯಲ್ಲೇ ಮುಂದುವರಿಯಲು ತಿಳಿಸಿದ್ದಾರೆ. ಆದ್ದರಿಂದ ತಾನು ಐಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ ಎಂದಿದ್ದಾರೆ. ಇಂಗ್ಲೆಂಡ್ನ ಕಾಳಿನ್ ಗ್ರೇವ್ಸ್ ಹೆಸರು ಹೆಚ್ಚು ಕೇಳಿಬರುತ್ತಿದೆ. ಆದರೆ ಅವರೇ ಅಧ್ಯಕ್ಷ ಹುದ್ದೆ ಪಡೆಯಲಿದ್ದಾರೆ ಎಂದು ಹೇಳುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ.