ನವದೆಹಲಿ: ಭಾರತದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ತೋರಿದ್ದ ರೋಹಿತ್ ಶರ್ಮಾ ಕಿವೀಸ್ನಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ಸುಲಭವಲ್ಲ, ಆದರೆ ಕಿವೀಸ್ ಸವಾಲನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಭಾರತ ತಂಡ ಮುಂದಿನ ತಿಂಗಳು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿ ಕುರಿತು ಮಾತನಾಡಿರುವ ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ, "ನ್ಯೂಜಿಲ್ಯಾಂಡ್ ಕ್ರಿಕೆಟ್ ಆಡಲು ಸುಲಭದ ಸ್ಥಳವಲ್ಲ. ಕೊನೆಯ ಪ್ರವಾಸದಲ್ಲಿ ನಾವು 1-0ಯಲ್ಲಿ ಟೆಸ್ಟ್ ಸರಣಿ ಕಳೆದುಕೊಂಡಿದ್ದೆವು. ಆದರೆ ತುಂಬಾ ಪೈಪೋಟಿ ನೀಡಿದ್ದೆವು. ಈಗಿರುವ ಅವರ ಬೌಲಿಂಗ್ ದಾಳಿ, ನಾವು ಅಂದು ಎದುರಿಸಿದ್ದ ಬೌಲಿಂಗ್ ದಾಳಿಗಿಂತ ತುಂಬಾ ವಿಭಿನ್ನವಾಗಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ನನಗೆ ವೈಯಕ್ತಿಕವಾಗಿ ಈ ಸರಣಿ ಅತ್ಯುತ್ತಮ ಸವಾಲಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೊಸ ಬೌಲ್ನಲ್ಲಿ ಬೌಲಿಂಗ್ ಮಾಡುವವರನ್ನು ಮತ್ತು ಇನ್ನಿಂಗ್ಸ್ ಮಧ್ಯದಲ್ಲಿ ಬೌಲಿಂಗ್ ಮಾಡುವವರನ್ನು ಎದುರಿಸುವುದು ಕಠಿಣ ಸವಾಲಾಗಲಿದೆ ಎಂದು ಎಂಬುದನ್ನು ರೋಹಿತ್ ಒಪ್ಪಿಕೊಂಡಿದ್ದಾರೆ.
ಭಾರತದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಒಂದು ದ್ವಿಶತಕ ಸೇರಿದಂತೆ 3 ಶತಕ ಸಿಡಿಸಿ ಮಿಂಚಿದ್ದ ರೋಹಿತ್ ಮುಂದಿನ ಸರಣಿಯಲ್ಲಿ ಬೌಲ್ಟ್, ನೈಲ್ ವ್ಯಾಗ್ನರ್, ಮ್ಯಾಟ್ ಹೆನ್ರಿ ಹಾಗೂ ಟಿಮ್ ಸೌಥಿಯಂತ ಸ್ವಿಂಗ್ ಬೌಲರ್ಗಳನ್ನು ಎದುರಿಸಬೇಕಾಗಿದೆ.
ಮೊದಲು ಹೊಸ ಬಾಲ್ ಎದುರಿಸುವುದು ಎಲ್ಲೇ ಆದರೂ ಸುಲಭವಲ್ಲ. ಅದರಲ್ಲೂ ಭಾರತದಿಂದಾಚೆ ಮತ್ತಷ್ಟು ಕಠಿಣವಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಲ್ ಹೆಚ್ಚು ಸ್ವಿಂಗ್ ಆಗಿರಲಿಲ್ಲ. ಪುಣೆ ಟೆಸ್ಟ್ನಲ್ಲಿ ಮಾತ್ರ ಸ್ವಿಂಗ್ ಕಂಡುಬಂದಿತ್ತು ಎಂದು ರೋಹಿತ್ ಹೇಳಿದರು.
2014ರಲ್ಲಿ ನಾವು ನ್ಯೂಜಿಲೆಂಡ್ನಲ್ಲಿ ಆಡಿರುವುದರಿಂದ ಅಲ್ಲಿ ಆಡುವುದು ಸುಲಭವಲ್ಲ ಎಂದು ತಿಳಿದಿದೆ. ಆದರೆ ಅಲ್ಲಿನ ಸವಾಲಿಗೆ ಸಿದ್ಧ ಎಂದು ರೋಹಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯ ಶ್ರೀಲಂಕಾ ವಿರುದ್ಧ ನಡೆಯುವ ಟೆಸ್ಟ್ ಸರಣಿಯಿಂದ ಕೊಹ್ಲಿ ಹೊರಗುಳಿದಿದ್ದು, ಇದೇ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ವಾಪಸಾಗಲಿದ್ದಾರೆ.