ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ-ಮಯಾಂಕ್ ಅಗರವಾಲ್ ಜೋಡಿ ದಾಖಲೆ ಮೇಲೆ ದಾಖಲೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ದೇಶಿ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿರುವ ಮಯಾಂಕ್, ಅದ್ಭುತ ದ್ವಿಶತಕ ಸಿಡಿಸಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ದಾಖಲೆ ಅಳಿಸಿ ಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯಲ್ಲಿ ಸ್ಮಿತ್ ಇನ್ನಿಂಗ್ಸ್ವೊಂದರಲ್ಲಿ 211ರನ್ಗಳಿಕೆ ಮಾಡಿದ್ದು 2019ರ ಟೆಸ್ಟ್ ಟೂರ್ನಿಯಲ್ಲಿ ಕ್ರಿಕೆಟಿಗನೋರ್ವ ವೈಯಕ್ತಿಕವಾಗಿ ಗಳಿಸಿದ್ದ ಅತಿ ದೊಡ್ಡ ಮೊತ್ತವಾಗಿತ್ತು. ಆದರೆ ಇದೀಗ ಕನ್ನಡಿಗ ಮಯಾಂಕ್ ಆ ದಾಖಲೆ ಮುರಿದಿದ್ದು, ಒಂದೇ ಇನ್ನಿಂಗ್ಸ್ನಲ್ಲಿ 215ರನ್ ಗಳಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಮಯಾಂಕ್-ರೋಹಿತ್ ಜೋಡಿ 317ರನ್ಗಳ ಜೊತೆಯಾಟ ನೀಡಿದ್ದು, ಈ ಹಿಂದೆ 2004ರಲ್ಲಿ ಸೆಹ್ವಾಗ್-ಗಂಭೀರ್ ನಿರ್ಮಿಸಿದ್ದ 218ರನ್ಗಳ ಜೊತೆಯಾಟದ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. 2019ರಲ್ಲೇ ಹೋಲ್ಡರ್ ಅಜೇಯ 202ರನ್, ವಿಲಿಯಮ್ಸನ್ 200ರನ್ ಹಾಗೂ ರಾಸ್ ಟೇಲರ್ 200ರನ್ ಗಳಿಸಿದ್ದರು.