ಬೆಂಗಳೂರು: ಪ್ರಸಕ್ತ ವರ್ಷದ ಮೂರನೇ ಬಿಸಿಸಿಐ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್ ಸೇರ್ಪಡೆಗೊಂಡಿರುವುದು ತಂಡದ ಬಲ ಹೆಚ್ಚಿಸಿದೆ.
ಕ್ವಾರ್ಟರ್ ಫೈನಲ್ನಲ್ಲಿ ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ನುಗ್ಗಿ ಗೆದ್ದು ಬಂದಿರುವ ಕರ್ನಾಟಕ ಯುವ ಪಡೆ ಇದೀಗ ಸೆಮಿಫೈನಲ್ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಿಲಿದೆ.
ಭಾರತ ತಂಡದಲ್ಲಿ ಅದ್ದೂರಿ ಬ್ಯಾಟಿಂಗ್ ಪ್ರದರ್ಶನ ತೋರಿರುವ ರಾಹುಲ್ ಕರ್ನಾಟಕ ತಂಡ ಸೇರಿರುವುದು ಬ್ಯಾಟಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಿದೆ. ಈಗಾಗಲೇ ಅನುಭವಿ ಮನೀಷ್ ಪಾಂಡೆ ಕ್ವಾರ್ಟರ್ ಫೈನಲ್ ವೇಳೆ ತಂಡಕ್ಕೆ ಸೇರಿಕೊಂಡಿದ್ದರು.
ಈಗಾಗಲೇ ಪ್ರಸಕ್ತ ವರ್ಷದ ಬಿಸಿಸಿಐ ಆಯೋಜಿಸಿರುವ ವಿಜಯ ಹಜಾರೆ(ಏಕದಿನ), ಸಯ್ಯದ್ ಮುಷ್ತಾಕ್ ಅಲಿ(ಟಿ20) ಟ್ರೋಫಿಗಳನ್ನು ಕರ್ನಾಟಕ ತಂಡಕ್ಕೆ ತಂದುಕೊಡುವಲ್ಲಿ ರಾಹುಲ್, ಮನೀಷ್ ಪಾಂಡೆ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಪ್ರಥಮ ದರ್ಜೆ ಟೂರ್ನಿಯಲ್ಲೂ ಮತ್ತೆ ಇವರಿಬ್ಬರ ನೇತೃತ್ವದಲ್ಲಿ ಕರುಣ್ ನಾಯರ್ ಪಡೆ ಮತ್ತೊಂದ ಟ್ರೋಫಿಯನ್ನು ಕರ್ನಾಟಕ ತಂದುಕೊಡಲು ಸಜ್ಜಾಗಿದ್ದಾರೆ.
ಕರ್ನಾಟಕ 8 ಬಾರಿ ರಣಜಿ ಟ್ರೋಫಿ ಎತ್ತಿ ಹಿಡಿದಿರುವ ಕರ್ನಾಟಕ ತಂಡ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಎರಡನೇ ತಂಡ ಎನಿಸಿಕೊಂಡಿದೆ. ಮುಂಬೈ 41 ಬಾರಿ ಪ್ರಶಸ್ತಿ ಪಡೆದಿದ್ದರೆ, ದೆಹಲಿ 7 ಪ್ರಶಸ್ತಿಗಳೊಂದಿಗೆ 3 ಸ್ಥಾನದಲ್ಲಿದೆ.