ಅಹ್ಮದಾಬಾದ್: ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಮುಂಬರುವ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅಭಿಪ್ರಾಯಪಟ್ಟಿದ್ದಾರೆ.
"ವಿಶ್ವಕಪ್‌ಗೆ ಹೋಗುವಾಗ, ಟೂರ್ನಮೆಂಟ್ನಲ್ಲಿ ಆತಿಥೇಯ ಭಾರತ ತಂಡವನ್ನು ನೀವು ಭಾಗಶಃ ನೆಚ್ಚಿನ ತಂಡವಾಗಿ ನೋಡಬಹುದು. ಈ ಪರಿಸ್ಥಿತಿಗಳಲ್ಲಿ ಟೂರ್ನಮೆಂಟ್ನಲ್ಲಿ ಒಂದು ಅತ್ಯುತ್ತಮ ತಂಡವಾಗಿರುವ ಭಾರತದ ವಿರುದ್ಧ ಆಡುತ್ತಿರುವುದು ನಮಗೆ ದೊರೆತಿರುವ ಅತ್ಯುತ್ತಮ ಮಾನ್ಯತೆ " ಎಂದು ಇಸಿಬಿ ಹಂಚಿಕೊಂಡ ವರ್ಚುವಲ್ ಮಾಧ್ಯಮಗೋಷ್ಠಿಯ ವಿಡಿಯೋದಲ್ಲಿ ಬಟ್ಲರ್ ಹೇಳಿದ್ದಾರೆ.
ಈ ಹಿಂದೆಯೂ ವಿಶ್ವಕಪ್ ಆಯೋಜಿಸುವ ಆತಿಥೇಯ ರಾಷ್ಟ್ರಗಳು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿವೆ. ಹಾಗಾಗಿ ಎಲ್ಲಾ ಮಾದರಿಯಲ್ಲೂ ಭಾರತ ಬಲಿಷ್ಠ ತಂಡ ಮತ್ತು ಟಿ20 ಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನನ್ನ ಪ್ರಕಾರ ತವರಿನಲ್ಲಿ ಆಡುವಾಗ ಭಾರತವೇ ಟೂರ್ನಿ ಗೆಲ್ಲುವ ನೆಚ್ಚಿನ ತಂಡ ಎಂದು ಬಟ್ಲರ್ ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಈ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಆದರೆ ಈ ಟೂರ್ನಮೆಂಟ್ ಆಯೋಜಿಸಲು ಇನ್ನಷ್ಟೇ ಸ್ಥಳಗಳನ್ನು ನಿರ್ಧಾರ ಮಾಡಬೇಕಿದೆ.
ಭಾರತ ಕೊನೆಯ ಬಾರಿಗೆ 2016ರಲ್ಲಿ ಟಿ20 ವಿಶ್ವಕಪ್ ಆಯೋಜನೆ ಮಾಡಿತ್ತು. ಸೆಮಿಫೈನಲ್ ಪ್ರವೇಶಿಸಿದ್ದ ಆತಿಥೇಯ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿತ್ತು.