ರಾಜ್ಕೋಟ್ (ಗುಜರಾತ್): ಪ್ರತಿ ಪಂದ್ಯದಲ್ಲೂ ಹೊಸ ಜವಾಬ್ದಾರಿ ಮತ್ತು ಹೊಸ ಪಾತ್ರ ವಹಿಸುತ್ತಿರುವುದು ನನಗೆ ಆಶೀರ್ವಾದ ಎಂಬಂತೆ ಭಾವಿಸುತ್ತೇವೆ ಎಂದು ಭಾರತದ ಕ್ರಿಕೆಟಿಗ ಕೆ.ಎಲ್.ರಾಹುಲ್ ಹೇಳಿದರು.
ಶುಕ್ರವಾರ ನಡೆದ ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಆಟಗಾರರಿಗೆ ಈ ಭಾಗ್ಯ ಸಿಗುತ್ತದೆ ಎಂದು ಭಾವಿಸುವುದಿಲ್ಲ. ಆದರೆ, ನನಗೆ ಸಿಕ್ಕಿದೆ. ನಾನು ಯಾವ ಕ್ರಮಾಂಕದಲ್ಲಿ ಬೇಕಾದರೂ ಉತ್ತಮವಾಗಿ ಆಡುವ ಸಾಮರ್ಥ್ಯ, ವಿಶ್ವಾಸ ಹೊಂದಿದ್ದೇನೆ. ಅದನ್ನು ಸಂತೋಷದಿಂದಲೇ ಸ್ವಾಗತಿಸುತ್ತೇನೆ ಎಂದರು.
ನಾನು ಇದೇ ಕ್ರಮಾಂಕದಲ್ಲಿ ಆಡಬೇಕೆಂಬ ಮಹದಾಸೆ ಹೊಂದಿಲ್ಲ. ಯಾವ ಕ್ರಮಾಂಕದಲ್ಲೂ ಬೇಕಾದರೂ ಸಂತೋಷದಿಂದಲೇ ಆಡುತ್ತೇನೆ. ಪಂದ್ಯದ ಗೆಲುವು ಮುಖ್ಯ ಎಂದು ತಿಳಿಸಿದರು.
ಇದಕ್ಕೂ ಮೊದಲು ಗಾಯದಿಂದಾಗಿ ಆರಂಭಿಕ ಆಟಗಾರ ಶಿಖರ್ ಧವನ್ ಕೆಲ ತಿಂಗಳಿಂದ ತಂಡದಿಂದ ಹೊರಗುಳಿದ ಸಂದರ್ಭದಲ್ಲಿ ಆ ಸ್ಥಾನವನ್ನು ರಾಹುಲ್ ನಿಭಾಯಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಆರಂಭಿಕರಾಗಿ ರೋಹಿತ್ ಶರ್ಮಾ ಅವರೊಂದಿಗೆ ಯಾರನ್ನು ಕಳುಹಿಸಬೇಕು ಎಂಬ ಗೊಂದಲ ತಂಡದಲ್ಲಿತ್ತು.
ಈಗ ಧವನ್ ತಂಡಕ್ಕೆ ಮರಳಿದ ಪರಿಣಾಮ ರಾಹುಲ್ಗೆ ನಾಯಕ ವಿರಾಟ್ ಕೊಹ್ಲಿಯ 3ನೇ ಕ್ರಮಾಂಕವನ್ನು ಬಿಟ್ಟುಕೊಡಲಾಯಿತು. ಆದರೆ, ಮೊದಲ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ ವಿಫಲರಾದರು. ಎರಡನೇ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆ ಮಾಡಲಾಯಿತು. ಕೊಹ್ಲಿ ಎಂದಿನಂತೆ ತಮ್ಮ ಸ್ಥಾನದಲ್ಲಿ, ರಾಹುಲ್ 4ನೇ ಕ್ರಮಾಂಕದಲ್ಲಿ ಬಂದು ಯಶಸ್ವಿಯಾದರು. ರಾಹುಲ್ ಈ ಪಂದ್ಯದಲ್ಲಿ ಕೊಹ್ಲಿ ನಂತರ ಬ್ಯಾಟಿಂಗ್ ಬೀಸಿ 52 ಎಸೆತಗಳಲ್ಲಿ 80 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 36 ರನ್ಗಳ ಗೆಲುವು ಸಾಧಿಸಿತು. ಈ ಗೆಲುವಿನಿಂದ ಮೂರು ಪಂದ್ಯಗಳ ಸರಣಿ 1–1 ರಲ್ಲಿ ಸಮನಾಗಿದ್ದು, ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಅಂತಿಮ ಪಂದ್ಯ ನಿರ್ಣಾಯಕವಾಗಿದೆ.