ಅಹ್ಮದಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗವಾಗಿ ಹೆಸರು ಮಾಡುತ್ತಿರುವ ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್, ಆಸ್ಟ್ರೇಲಿಯಾ ತಂಡದ ವಿರುದ್ಧ ಅವರ ನೆಲದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದಾಗ ಯುದ್ದಕ್ಕೆ ಹೋಗುತ್ತಿರುವ ಭಾವನೆ ಉಂಟಾಗಿತ್ತು ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡುವುದು ಅನುಭವಿ ಕ್ರಿಕೆಟಿಗರಿಗೂ ಸಹ ಕಠಿಣವಾಗಿರುತ್ತದೆ. ಆದರೆ 21 ವರ್ಷದ ಗಿಲ್ ತಮ್ಮ ಚೊಚ್ಚಲ ಟೂರ್ನಿಯಲ್ಲೇ ಮರೆಯಲಾಗದ ಅನುಭವ ಪಡೆದಿದ್ದಾರೆ. ಮೆಲ್ಬೋರ್ನ್‌ನಲ್ಲಿ ಪಾದಾರ್ಪಣೆ ಮಾಡಿದ ಆರಂಭಿಕ ಆಟಗಾರ 3 ಟೆಸ್ಟ್ ಪಂದ್ಯಗಳಿಂದ 259 ರನ್ಗಳಿಸಿದ್ದರು. ಬ್ರಿಸ್ಬೇನ್ನಲ್ಲಿ ಆಕರ್ಷಕ 91 ರನ್ಗಳಿಸಿ ಐತಿಹಾಸಿಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಈ ಸರಣಿಯನ್ನು ಭಾರತ 2-1ರಲ್ಲಿ ಜಯಿಸಿತ್ತು.
"ಫೀಲ್ಡ್ನಲ್ಲಿ ಇರುವವರೆಗೆ ನಾನು ಸಾಮಾನ್ಯನಾಗಿದ್ದೆ, ಆದರೆ ನಾವು ಬ್ಯಾಟಿಂಗ್ ಮಾಡಿ ತೆರಳುವಾಗ ಮತ್ತು ಡ್ರೆಸ್ಸಿಂಗ್ ರೂಮ್ನಿಂದ ಪಿಚ್ಗೆ ನಡೆದು ಬರುವಾಗ ಪ್ರೇಕ್ಷಕರು ಆಸೀಸ್ ತಂಡಕ್ಕೆ ಬೆಂಬಲ ನೀಡುವ ಸಲುವಾಗಿ ಮಾಡುತ್ತಿದ್ದ ಹರ್ಷೋದ್ಗಾರ ಕೇಳಿದಾಗ, ನಾನು ಯುದ್ದಕ್ಕೆ ಹೋಗುತ್ತಿದ್ದೇನೆ ಎಂಬ ಅನುಭವ ಆಗಿತ್ತು." ಎಂದು ಕೆಕೆಆರ್ನ ಅಧಿಕೃತ ವೆಬ್ಸೈಟ್ಗೆ ತಿಳಿಸಿದ್ದಾರೆ.
ಆಟ ಪ್ರಾರಂಭವಾಗುವ ಮೊದಲು, ಮುಖ್ಯ ಕೋಚ್ ರವಿಶಾಸ್ತ್ರಿ ಗಿಲ್ಗೆ ಟೆಸ್ಟ್ ಕ್ಯಾಪ್ ನೀಡಿದ್ದರು. ಈ ಸಂದರ್ಭದಲ್ಲಿ ತಮಗೆ ಉಂಟಾದ ಭಾವನೆಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
"ಅದೊಂದು ವಿವರಿಸಲಾಗದ ಭಾವನೆ. ಆ ಒಂದು ಕ್ಷಣ, ಅಂದು ನಾನು ಭಾವನೆಗಳ ಸಮುದ್ರದಲ್ಲಿ ಹಾದು ಹೋದಂತೆ ಭಾಸವಾಗಿತ್ತು. ರವಿಶಾಸ್ತ್ರಿ ನನ್ನ ಕುರಿತು ಮಾತನಾಡಿದರು, ನಾನು ಅವರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದೆ." ಎಂದು ತಮ್ಮ ಪಾದಾರ್ಪಣೆ ಸಂದರ್ಭದ ಮಧುರ ಕ್ಷಣವನ್ನು ವಿವರಿಸಿದ್ದಾರೆ.
ಇದನ್ನು ಓದಿ:ಭಾರತ vs ನ್ಯೂಜಿಲ್ಯಾಂಡ್: ಟೆಸ್ಟ್ ಫೈನಲ್ಗೆ ಸೀಮಿತ ಅಭಿಮಾನಿಗಳಿಗೆ ಅವಕಾಶ