ಮುಂಬೈ: ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ದ ಡೆಲ್ಲಿ ತಂಡದ ವೇಗಿ ಆವೇಶ್ ಖಾನ್ ತಮ್ಮ ಬಹುದಿನಗಳ ಕನಸು ಈಡೇರಿದೆ ಎಂದು ಹೇಳಿದ್ದಾರೆ.
ಐಪಿಎಲ್ನ ಎರಡನೇ ಪಂದ್ಯದಲ್ಲಿ 24 ವರ್ಷದ ಆವೇಶ್ ಖಾನ್ 23 ರನ್ ನೀಡಿ 2 ವಿಕೆಟ್ ಪಡೆದು ಡೆಲ್ಲಿ ತಂಡದ ಶ್ರೇಷ್ಠ ವೇಗಿ ಎನಿಸಿಕೊಂಡಿದ್ದರು. ಅವರು ಡುಪ್ಲೆಸಿಸ್ ಮತ್ತು ಧೋನಿ ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಸಿಎಸ್ಕೆ ನೀಡಿದ 189 ರನ್ಗಳನ್ನು ಡೆಲ್ಲಿ ತಂಡ ಇನ್ನು 8 ಎಸೆತಗಳಿರುವಂತೆ ಗೆದ್ದು ಶುಭಾರಂಭ ಮಾಡಿತ್ತು.
ಸಿಎಸ್ಕೆ ನಾಯಕ ಧೋನಿ ಕೇವಲ 2 ಎಸೆತಗಳನ್ನೆದುರಿಸಿ ಆವೇಶ್ ಖಾನ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿದ್ದರು. ಧೋನಿ ಫುಲ್ಶಾಟ್ ಹೊಡೆಯಲೆತ್ನಿಸಿದಾಗ ಚೆಂಡು ಇನ್ಸೈಡ್ ಎಡ್ಜ್ ಆಗಿ ಸ್ಟಂಪ್ ಎಗರಿಸಿತ್ತು.
3 ವರ್ಷಗಳ ಹಿಂದೆಯೇ ನನಗೆ ಮಹಿ ಭಾಯ್ ವಿಕೆಟ್ ಪಡೆಯುವ ಅವಕಾಶ ಸಿಕ್ಕಿತ್ತು. ಆದರೆ, ಅಂದು ಯಾರೋ ಕ್ಯಾಚ್ ಬಿಟ್ಟಿದ್ದರು. ಆದರೆ, ಈಗ ಮಹಿ ಭಾಯ್ ವಿಕೆಟ್ ಪಡೆಯುವ ಕನಸು ನನಸಾಗಿದೆ. ಹಾಗಾಗಿ ನಾನು ತುಂಬಾ ಸಂತೋಷದಿಂದಿದ್ದೇನೆ. ಧೋನಿ ತುಂಬಾ ದಿನಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದಿರುವುದರಿಂದ ನಾವು ಅವರ ಮೇಲೆ ಒತ್ತಡ ಏರಲು ಯೋಜನೆ ರೂಪಿಸಿದ್ದೆವು. ಅವರ ಆ ಒತ್ತಡದಿಂದಲೇ ನಾನು ವಿಕೆಟ್ ಪಡೆಯಲು ಸಾಧ್ಯವಾಯಿತು" ಎಂದು ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆವೇಶ್ ಖಾನ್ ತಿಳಿಸಿದ್ದಾರೆ.
ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿರುವುದು ಖುಷಿ ತಂದಿದೆ. ಮಹಿ ಭಾಯ್ ಮತ್ತು ಪ್ಲೆಸಿಸ್ ವಿಕೆಟ್ ಪಡೆದಿದ್ದು ತಂಡ ಉತ್ತಮ ಹಂತದಲ್ಲಿರಲು ಅನುಕೂಲವಾಯಿತು. ಫ್ರಾಂಚೈಸಿ ನನಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವು ಎಲ್ಲರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ, ಇದೇ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಖಾನ್ ತಿಳಿಸಿದ್ದಾರೆ.
ಇದನ್ನು ಓದಿ:ನಾಯಕನಾಗಿ ಸಾಧಿಸಿದ ಮೊದಲ ಗೆಲುವಿನ ಶ್ರೇಯವನ್ನು ಧೋನಿಗೆ ಅರ್ಪಿಸಿದ ರಿಷಭ್ ಪಂತ್