ದುಬೈ: 13ನೇ ಆವೃತ್ತಿಯ ಐಪಿಎಲ್ ಕೋವಿಡ್ 19ನ ನಂತರ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದೆ. ಜೊತೆಗೆ ಪಂದ್ಯದಿಂದ ಪಂದ್ಯ ರೋಮಾಂಚನಕಾರಿಯಾಗಿ ಮೂಡಿಬರುತ್ತಿವೆ. ನಾಟಕೀಯ ಅಂತ್ಯ ಕಂಡುಬರುತ್ತಿವೆ.
ಭಾನುವಾರು ಒಂದೇ ದಿನ ಎರುಡು ಪಂದ್ಯಗಳು ಸೂಪರ್ ಓವರ್ನಲ್ಲಿ ಅಂತ್ಯಗೊಳ್ಳುವ ಮೂಲಕ ನಾಲ್ಕು ತಂಡಗಳು ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದವು. ಅದರಲ್ಲೂ ಮುಂಬೈ ಮತ್ತು ಪಂಜಾಬ್ ತಂಡಗಳ ಸೂಪರ್ ಓವರ್ ಕೂಡ ಟೈ ಆಗಿದ್ದರಿಂದ ಟಿ20 ಕ್ರಿಕೆಟ್ ಇತಿಹಾಸದಲ್ಲಿ 2ನೇ ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾದವು.
ಈ ಪಂದ್ಯ ಎಷ್ಟು ರೋಚಕ ವಾಗಿದ್ದವೆಂದರೆ, ಕಾಮೆಂಟೇಟರ್ಗಳು ಕೂಡ ಆರಂಭದಲ್ಲಿ ನಿಯಮಗಳನ್ನು ಮರೆತು, ವೀಕ್ಷಕರಿಗೆ ತಿಳಿಸುವಲ್ಲಿ ಅಸಮರ್ಥರಾಗಿ ನಂತರ ಕ್ಷಮೆಯಾಚಿಸಿದ್ದರು.
ಎರಡು ಸೂಪರ್ ಓವರ್ಗಳಲ್ಲಿ ನಡೆದದ್ದೇನು?
ಮೊದಲ ಸೂಪರ್ ಓವರ್ನಲ್ಲಿ ಮುಂಬೈ ತಂಡದ ಬುಮ್ರಾ ಪೂರನ್ ಮತ್ತು ರಾಹುಲ್ರನ್ನು ಔಟ್ ಮಾಡಿ 5 ರನ್ ನೀಡಿದರು. ನಂತರ ಪಂಜಾಬ್ ಪರ ಶಮಿ ಕೂಡ 5 ರನ್ ನೀಡಿ ಮತ್ತೊಂದು ಟೈ ಆಗಲು ನೆರವಾದರು. ಈ ವೇಳೆ ಡಿಕಾಕ್ ರನ್ಔಟ್ ಆಗಿದ್ದರು.
ಐಸಿಸಿ ನಿಯಮಗಳ ಪ್ರಕಾರ ಸೂಪರ್ ಓವರ್ ಟೈ ಆದರೆ ಮತ್ತೊಂದು ಸೂಪರ್ ನಡೆಸಬೇಕಾಗಿರುವುದರಿಂದ ಫಲಿತಾಂಶಕ್ಕಾಗಿ 2ನೇ ಸೂಪರ್ ಓವರ್ ಆಡಬೇಕಾಯಿತು. ಇದರಲ್ಲಿ ಮುಂಬೈ 11 ರನ್ಗಳಿಸಿದರೆ, ಪಂಜಾಬ್ 4 ಎಸೆತಗಳಲ್ಲಿ 15 ರನ್ಗಳಿಸಿ ಗೆಲುವು ಸಾಧಿಸಿತ್ತು.
2ನೇ ಸೂಪರ್ ಓವರ್ ನಿಯಮಗಳು
ಐಸಿಸಿ ನಿಯಮಧನ್ವಯ ಸೂಪರ್ ಓವರ್ನಲ್ಲಿ ಔಟ್ ಆದವರು 2ನೇ ಸೂಪರ್ ಓವರ್ನಲ್ಲಿ ಆಡುವ ಹಾಗಿಲ್ಲ. ಜೊತೆಗೆ ಬೌಲರ್ಗಳು ಒಮ್ಮೆ ಸೂಪರ್ ಓವರ್ ಮಾಡಿದವರು ಮುಂದಿನ ಸೂಪರ್ ಓವರ್ನಲ್ಲಿ ಬೌಲಿಂಗ್ ಮಾಡಲು ಅನರ್ಹರಾಗಿರುತ್ತಾರೆ.
ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡದ ರಾಹುಲ್, ಪೂರನ್ ಹಾಗೂ ಚೇಸಿಂಗ್ ವೇಳೆ ಡಿಕಾಕ್ ಔಟಾಗಿದ್ದರಿಂದ 2ನೇ ಸೂಪರ್ ಓವರ್ನಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಹಾಗಾಗಿ ಮುಂಬೈ ತಂಡದಿಂದ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಆಯ್ಕೆಯಾದರೆ, ಪಂಜಾಬ್ ತಂಡದಿಂದ ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್ ಹಾಗೂ ದೀಪಕ್ ಹೂಡ ಆಯ್ಕೆಯಾಗಿದ್ದರು.
ಇನ್ನು ಶಮಿ ಮತ್ತು ಬುಮ್ರಾ ಮೊದಲ ಸೂಪರ್ ಓವರ್ನಲ್ಲಿ ಬೌಲಿಂಗ್ ಮಾಡಿದ್ದರಿಂದ 2ನೇ ಓವರ್ಗಳಲ್ಲಿ ಜೋರ್ಡಾನ್ ಹಾಗೂ ಬೌಲ್ಟ್ ಮಾಡಿದರು.