ಮುಂಬೈ : ಐಪಿಎಲ್ 13ನೇ ಆವೃತ್ತಿ ಕೋವಿಡ್-19 ಕಾರಣ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಆದರೆ, ಇದೀಗ ಯುಎಇನಲ್ಲಿ ಸೆಪ್ಟೆಂಬರ್ 26ರಿಂದ ನವೆಂಬರ್ 7ರ ಮಧ್ಯದಲ್ಲಿ ಶ್ರೀಮಂತ ಕ್ರಿಕೆಟ್ ಲೀಗ್ ನಡೆಸಲು ಮುಂದಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
2020ರ ಆವೃತ್ತಿಯ ಟೂರ್ನಿ ಮಾರ್ಚ್ 29ರಿಂದ ಶುರುವಾಗಬೇಕಿತ್ತು. ಆದರೆ, ಕೊವೀಡ್ ಸಾಂಕ್ರಾಮಿಕ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಆದರೂ ಬಿಸಿಸಿಐ ಐಪಿಎಲ್ ನಡದೇ ನಡೆಯುತ್ತದೆ ಎಂಬ ವಿಶ್ವಾಸ ಮಾತ್ರ ಕಳೆದುಕೊಂಡಿರಲಿಲ್ಲ. ಒಂದು ವೇಳೆ ಐಪಿಎಲ್ ನಡೆಯದೇ ಹೋದಲ್ಲಿ ಬಿಸಿಸಿಐಗೆ ಸುಮಾರು 4000 ಕೋಟಿ ನಷ್ಟವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.
ಟಿ20 ವಿಶ್ವಕಪ್ ಭವಿಷ್ಯದ ಬಗ್ಗೆ ಸಾಕಷ್ಟು ಗೊಂದಲದ ನಂತರ ಬಿಸಿಸಿಐ 2020ರ ಐಪಿಎಲ್ ನಡೆಸಲು ತೀರ್ಮಾನ ಮಾಡಿದೆ. ಈಗಾಗಲೇ ಬಿಸಿಸಿಐ ಐಪಿಎಲ್ನ ವೇಳಾಪಟ್ಟಿಯನ್ನು ಸಂಪೂರ್ಣ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 26ರಿಂದ ನವೆಂಬರ್ 7ರ ನಡುವೆ ಟೂರ್ನಿ ನಡೆಯಲಿದೆ ಎನ್ನಲಾಗುತ್ತಿದೆ.
'ಬಿಸಿಸಿಐ ಮುಂದೆ ಇರುವ ಏಕೈಕ ಆಯ್ಕೆ ಇದಾಗಿದೆ(ದಿನಾಂಕ). ಈಗಾಗಲೇ ಶೇ.80ರಷ್ಟು ವೇಳಾಪಟ್ಟಿ ಮುಗಿದಿದೆ. ಈ ವಿಚಾರವಾಗಿ ಬಿಸಿಸಿಐ ಎಲ್ಲಾ ವಿಭಾಗದಿಂದಲೂ ಅನುಮೋದನೆ ಪಡೆಯುತ್ತಿದೆ' ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.