ಆಂಟಿಗುವಾ: ವಿಂಡೀಸ್ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿರುವ ವಿರಾಟ್ ಕೊಹ್ಲಿ ಬಳಗ ಇದೀಗ ಟೆಸ್ಟ್ ಪಂದ್ಯಕ್ಕೆ ಅಣಿಯಾಗಿದೆ. ಟಿ-20 ಹಾಗೂ ಏಕದಿನ ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ, ಇದೀಗ ವೈಟ್ ಜೆರ್ಸಿ ಸರಣಿಯ ಮೇಲೂ ಕಣ್ಣಿಟ್ಟಿದೆ.
ಇಂದು ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ಗೆ ಒಳಪಡುವ ಕಾರಣದಿಂದ ಸರಣಿ ಗೆಲುವು ಉಭಯ ತಂಡಗಳಿಗೂ ಮಹತ್ವದ್ದಾಗಿದೆ.
ಎರಡು ಮಾದರಿ ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿರುವ ವಿರಾಟ್ ಪಡೆ ಆಂಟಿಗುವಾದಲ್ಲಿ ಇಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ಓಟವನ್ನು ಮುಂದುವರೆಸುವ ಆತ್ಮವಿಶ್ವಾಸದಲ್ಲಿದೆ.
![team India](https://etvbharatimages.akamaized.net/etvbharat/prod-images/4206104_th.jpg)
ಐದು ಬೌಲರ್ಗಳನ್ನು ಆಡಿಸಬೇಕೋ ಅಥವಾ ರೋಹಿತ್ ಹಾಗೂ ರಹಾನೆಗೆ ಅವಕಾಶ ಕಲ್ಪಿಸಬೇಕೋ ಎನ್ನುವ ಗೊಂದಲ್ಲಿ ನಾಯಕ ವಿರಾಟ್ ಕೊಹ್ಲಿ ಇದ್ದು, ಐದು ಬೌಲರ್ಗಳನ್ನು ಕಣಕ್ಕಿಳಿದರೆ ರಹಾನೆ ತಂಡದಿಂದ ಹೊರಗುಳಿಯಲಿದ್ದಾರೆ.
ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಕೆ.ಎಲ್.ರಾಹುಲ್, ರೋಹಿತ್ ಶರ್ಮಾರಂತಹ ಪ್ರಮುಖ ಬ್ಯಾಟ್ಸ್ಮನ್ಗಳಿದ್ದು, ವಿಂಡೀಸ್ ಬೌಲರ್ಗಳು ಈ ದಾಂಡಿಗರನ್ನು ಬೇಗನೇ ಕಟ್ಟಿಹಾಕಿದಲ್ಲಿ ಕೊಂಚ ನಿಟ್ಟುಸಿರು ಬಿಡಬಹುದು.
ಮತ್ತೊಂದು ಮಹತ್ವದ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ...!
ಇನ್ನು ವಿಂಡೀಸ್ ತಂಡದಲ್ಲಿ ಶೈ ಹೋಪ್, ಜಾನ್ ಕ್ಯಾಂಪ್ಬೆಲ್ ಹಾಗೂ ಶಿಮ್ರೋನ್ ಹೇಟ್ಮಯರ್ ಪ್ರಮುಖ ಆಧಾರಸ್ತಂಭವಾಗಿದ್ದು, ಇವರನ್ನೇ ಬಲವಾಗಿ ನೆಚ್ಚಿಕೊಂಡಿದೆ. ಇದರ ಜೊತೆಗೆ ಅನುಭವಿ ಆಟಗಾರ ಡಾರೆನ್ ಬ್ರಾವೋ ಸಹ ತಂಡಕ್ಕೆ ನೆರವಾಗಲಿದ್ದಾರೆ.
![Weat Indies](https://etvbharatimages.akamaized.net/etvbharat/prod-images/4206104_t.jpg)