ಸಿಡ್ನಿ : ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಮತ್ತು ಟಿ20 ಕ್ರಿಕೆಟ್ ಸರಣಿಯಲ್ಲಿ ಹೊಸ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದ ಟೀಂ ಇಂಡಿಯಾ ಆಟಗಾರರು, ಡಿ.17ರಿಂದ ಆರಂಭವಾಗುವ ಟೆಸ್ಟ್ ಸರಣಿಯಲ್ಲೂ ನೂತನ ಜೆರ್ಸಿ ತೊಡಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಅಡಿಲೇಡ್ನಲ್ಲಿ ನಡೆಯಲಿರುವ ಅಹರ್ನಿಶಿ ಪಂದ್ಯದ ಮೂಲಕ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಭಾರತದ ನೂತನ ಟೆಸ್ಟ್ ಜೆರ್ಸಿಯಲ್ಲಿ ಪ್ರಮುಖ ಪ್ರಾಯೋಜಕರ ಹೆಸರು ಟೀ ಶರ್ಟ್ ಮಧ್ಯದಲ್ಲಿರಲಿದೆ.
ಈ ಮೊದಲು ಮುಖ್ಯ ಪ್ರಾಯೋಜಕರ ಲೋಗೊ ಜೆರ್ಸಿಯ ಬಲ ಮೇಲ್ಭಾಗದಲ್ಲಿರುತ್ತಿತ್ತು. ವಿದ್ಯಾಭ್ಯಾಸ ಸಂಸ್ಥೆ ಬೈಜೂಸ್ ಸದ್ಯ ಟೀಂ ಇಂಡಿಯಾದ ಪ್ರಾಯೋಜಕತ್ವ ಹೊಂದಿದೆ. ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಈ ಹೊಸ ವಿನ್ಯಾಸದ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದರು.
ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 247 ರನ್ ಗಳಿಸಿದ್ರೆ, ಆಸ್ಟ್ರೇಲಿಯಾ ಇದಕ್ಕುತ್ತರವಾಗಿ 306 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. 2ನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ 189 ರನ್ ಗಳಿಸಿ 140 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ, ನಿಗದಿತ ಓವರ್ಗಳ ಅಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 52 ರನ್ ಗಳಿಸುವ ಮೂಲಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.