ಮುಂಬೈ: 14ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿರುವ ಕನ್ನಡಿಗ ರಾಬಿನ್ ಉತ್ತಪ್ಪ, ಐಪಿಎಲ್ನಲ್ಲಿ 1000ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಳ್ಳಬೇಕೆಂಬುದು ತಮ್ಮ ಬಯಕೆಯೆಂದು ತಿಳಿಸಿದ್ದಾರೆ.
ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ನಲ್ಲಿ ಆಡಿದ್ದ ರಾಬಿನ್ ಉತ್ತಪ್ಪರನ್ನು ಸಿಎಸ್ಕೆ ವಿನಿಯಮ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಇದೀಗ ಸುದೀರ್ಘ ಸಮಯದ ನಂತರ ಮತ್ತೆ ಎಂಎಸ್ ಧೋನಿ ನಾಯಕತ್ವದಡಿ ಆಡಲಿರುವ ಅವರು ಐಪಿಎಲ್ನಲ್ಲಿ 1000 ರನ್ ಗಳಿಸುವ ಗುರಿ ಹೊಂದಿರುವುದಾಗಿ ಇಎಸ್ಪಿನ್ ನಡೆಸಿದ ಸಂದರ್ಶನದ ವೇಳೆ ತಿಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಸೇರಿದ ನಂತರ ನನ್ನಲ್ಲಿ ಮೂಡಿರುವ ಪ್ರಮುಖ ಗುರಿಯೆಂದರೆ ಐಪಿಎಲ್ ಟೂರ್ನಿಯಲ್ಲಿ 1,000 ರನ್ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಳ್ಳುವುದು. ಜೊತೆಗೆ ತಂಡದ ಗೆಲುವಿನಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಲು ಬಯಸುತ್ತೇನೆ ಎಂದು ಉತ್ತಪ್ಪ ಹೇಳಿದ್ದಾರೆ.
2014ರಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್ ತಂಡದ ಪರ ಉತ್ತಪ್ಪ 660 ರನ್ಗಳಿಸಿರುವುದು ಅವರು ಸೀಸನ್ವೊಂದರ ಗರಿಷ್ಠ ಸ್ಕೋರ್ ಆಗಿದೆ. ಆ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಕೂಡ ಪಡೆದಿದ್ದರು. ಇನ್ನು, ಐಪಿಎಲ್ ಆವೃತ್ತಿಯಲ್ಲಿ ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಅವರು 2016ರಲ್ಲಿ 973 ರನ್ಗಳಿಸಿದ್ದರು. ಇದರಲ್ಲಿ 4 ಶತಕ ಕೂಡ ಸೇರಿದ್ದವು.
ಇನ್ನು, ಯುಎಇನಲ್ಲಿ ನಡೆದಿದ್ದ 13ನೇ ಆವೃತ್ತಿಯ ಐಪಿಎಲ್ನಲ್ಲಿ ಉತ್ತಪ್ಪ ಕೇವಲ 196 ರನ್ಗಳಿಸಲಷ್ಟೇ ಶಕ್ತವಾಗಿದ್ದರು.
ಇದನ್ನು ಓದಿ:ಧೋನಿಗೆ ಬೌಲರ್‌ಗಳಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವ ಕಲೆ ತಿಳಿದಿದೆ: ಕೆ.ಗೌತಮ್