ಮುಂಬೈ: ಭಾರತ ತಂಡದ ಆಯ್ಕೆ ಸಮಿತಿ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್ ಶರ್ಮಾರನ್ನು ಕೈಬಿಟ್ಟಿದೆ. ಆದರೆ ರೋಹಿತ್ ಶರ್ಮಾ ನಿನ್ನೆ ನೆಟ್ಸ್ನಲ್ಲಿ ಆಭ್ಯಾಸ ನಡೆಸಿದ್ದಾರೆ. ಆದ್ದರಿಂದ ರೋಹಿತ್ ಗಾಯವನ್ನು ಬಿಸಿಸಿಐ ಆಯ್ಕೆ ಸಮಿತಿ ಯಾವ ರೀತಿ ಪರಿಗಣಿಸಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಒತ್ತಾಯಿಸಿದ್ದಾರೆ.
"ನಾನು ಯಾವುದೇ ಸಾಮಾಜಿಕ ಜಾಲತಾಣದಲ್ಲಿಲ್ಲ. ಆದರೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನೆಟ್ಸ್ನಲ್ಲಿ ಅಭ್ಯಾಸ ಮಾಡಿರುವುದು ನನಗೆ ಗೊತ್ತಿದೆ. ಅವರ ಗಾಯ ತುಂಬಾ ಗಂಭೀರವಾಗಿದ್ದರೆ, ಆತ ಅಭ್ಯಾಸ ನಡೆಸುತ್ತಿರಲಿಲ್ಲ. ನಾವು ಡಿಸೆಂಬರ್ 17 ರಂದು ಪ್ರಾರಂಭವಾಗುವ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುತ್ತಿದ್ದೇವೆ. ಅದು ಒಂದೂವರೆ ತಿಂಗಳು ದೂರದಲ್ಲಿದೆ. ಅದರೆ ರೋಹಿತ್ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿರುವುದರಿಂದ ಅವರ ಗಾಯ ಯಾವ ರೀತಿಯದ್ದೆಂದು ನನಗೆ ತಿಳಿಯುತ್ತಿಲ್ಲ. ಹಾಗಾಗಿ ರೋಹಿತ್ರನ್ನು ಆಯ್ಕೆ ಮಾಡದ ಬಗ್ಗೆ ಬಿಸಿಸಿಐ ಸ್ಪಷ್ಟನೆ ತೋರಬೇಕಿದೆ. ಆತನಲ್ಲಿ ಇರುವ ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳಲು ಭಾರತೀಯ ಅಭಿಮಾನಿಗಳು ಅರ್ಹರಾಗಿದ್ದಾರೆ" ಎಂದು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಪಂಜಾಬ್ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದ ನಂತರ ಗವಾಸ್ಕರ್ ಹೇಳಿದ್ದಾರೆ.
ಪಂಜಾಬ್ ತಂಡದ ಮಯಾಂಕ್ ಅಗರ್ವಾಲ್ ಕೂಡ 2 ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅವರು ಮೂರು ಮಾದರಿಯ ತಂಡದಲ್ಲೂ ಕಾಣಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಗವಾಸ್ಕರ್, ಫ್ರಾಂಚೈಸಿಗಳು ತಮ್ಮ ತಂಡದ ಸಮಸ್ಯೆಗಳನ್ನು ಹೊರಬಿಟ್ಟು ಎದುರಾಳಿಗಳಿಗೆ ಮಾನಸಿಕವಾಗಿ ಪ್ರಯೋಜನ ಪಡೆಯಲು ಬಯಸುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ಅವರಿಬ್ಬರು ಭಾರತ ತಂಡದ ಪ್ರಮುಖ ಆಟಗಾರರು, ರಾಷ್ಟ್ರೀಯ ತಂಡದ ಬಗ್ಗೆ ಮಾತನಾಡುವಾಗ ಅವರ ಬಗ್ಗೆ ತಿಳಿದುಕೊಳ್ಳುವ ಅರ್ಹತೆ ಭಾರತೀಯ ಅಭಿಮಾನಿಗಳಿಗಿದೆ ಎಂದು ಅವರು ಹೇಳಿದ್ದಾರೆ.