ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತನ್ನ ಉದ್ಯೋಗಿಗಳಲ್ಲಿ ಶೇಕಡಾ 20 ರಷ್ಟು ಕಡಿತಗೊಳಿಸಲಿದ್ದು, ಇದು ಸುಮಾರು 62 ಉದ್ಯೋಗಗಳಿಗೆ ಸಮನಾಗಿರುತ್ತದೆ ಎಂದು ಸಿಇಒ ಟಾಮ್ ಹ್ಯಾರಿಸನ್ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿರುವ ಆರ್ಥಿಕ ಪರಿಣಾಮವನ್ನು ಎದುರಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹ್ಯಾರಿಸನ್ ಇಸಿಬಿಯ ವೆಬ್‌ಸೈಟ್‌ನಲ್ಲಿ ಹಾಕಿರುವ ಸುದೀರ್ಘ ಹೇಳಿಕೆಯಲ್ಲಿ ತಿಳಿಸಿದ್ದು, ಇದು ದೀರ್ಘಕಾಲೀನವಾದ ಕ್ರಮ ಎಂದು ಅವರು ಹೇಳಿದ್ದಾರೆ.
" ನಾವು ನಮ್ಮ ಮಹತ್ವಾಕಾಂಕ್ಷೆಗಳಿಗೆ ಧಕ್ಕೆಯಾಗದಂತೆ ಕೇಂದ್ರ ವೆಚ್ಚಗಳನ್ನು ಕಡಿಮೆ ಮಾಡುವ ಸಲುವಾಗಿ ಇಸಿಬಿಯ ರಚನೆ ಮತ್ತು ಬಜೆಟ್ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹ್ಯಾರಿಸನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾವು ಮಂಡಳಿಯಿಂದ ಅನುಮೋದಿತವಾಗಿರುವ ಪ್ರಸ್ತಾಪಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದೇವೆ. ಇದರಿಂದ ಗಮನಾರ್ಹವಾದ ಉಳಿತಾಯ ವಾಗುತ್ತದೆ. ಈ ಬದಲಾವಣೆ ಇಸಿಬಿಯ ಪ್ರತಿಯೊಂದು ಭಾಗದಲ್ಲೂ ಪ್ರಭಾವಿತವಾಗಿದೆ. ಉಳಿತಾಯ ಮಾಡಬೇಕೆಂದರೆ ಈ ಉದ್ಯೋಗ ಕಡಿತವನ್ನು ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಪ್ರಸ್ತಾವನೆಗಳಿಂದ ತೊಂದರೆಗೊಳಗಾದ ನೌಕರರನ್ನು ಬೆಂಬಲಿಸಲು ಇಸಿಬಿ ನೋಡುತ್ತಿದೆ ಎಂದು ಹ್ಯಾರಿಸನ್ ಹೇಳಿದ್ದಾರೆ. "ಮುಂಬರುವ ವಾರಗಳಲ್ಲಿ ನಾವು ನಮ್ಮ ಕ್ರೀಡೆಯ ಭವಿಷ್ಯವನ್ನು ಕಾಪಾಡಲು ಪ್ರಯತ್ನಿಸುತ್ತಿರುವುದರಿಂದ ಈ ಪ್ರಸ್ತಾಪಗಳಿಂದ ತೊಂದರೆಗೆ ಒಳಗಾಗುವ ನಮ್ಮ ಸಹೋದ್ಯೋಗಿಗಳಿಗೆ ನಾವು ಬೆಂಬಲ ನೀಡುತ್ತೇವೆ. ಈ ಪ್ರಕ್ರಿಯೆಯು ಮುಂದುವರಿಯುತ್ತಿದ್ದು, ಮುಂದಿನ ದಿನಗಳಲ್ಲಿ ನಾವು ಹೆಚ್ಚಿನ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ" ಎಂದು ಅವರು ಹೇಳಿದ್ದಾರೆ.