ಸಿಡ್ನಿ (ಆಸ್ಟ್ರೇಲಿಯಾ): ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಐಸಿಸಿ ನೂತನವಾಗಿ ತಂದಿರುವ ನಿಯಮ ಖಂಡಿತವಾಗಿಯೂ ಆಶ್ಚರ್ಯಕರವಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಗರಿಷ್ಠ ಅಂಕ ಪಡೆದಿರುವ ತಂಡದ ಬದಲು ಗರಿಷ್ಠ ಗೆಲುವಿನ ಸರಾಸರಿ ಹೊಂದಿರುವ ತಂಡಗಳು ಫೈನಲ್ ಪ್ರವೇಶಿಸಲಿವೆ ಎಂದು ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿದ್ದು, ಈ ನಿಮಯ ಜಾರಿಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ಕೊಹ್ಲಿ, ಇದು ಖಂಡಿತವಾಗಿಯೂ ಆಶ್ಚರ್ಯಕರವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ಗೆ ಅರ್ಹತೆ ಪಡೆದ ಅಗ್ರ ಎರಡು ತಂಡಗಳಿಗೆ ಅಂಕಗಳು ಮುಖ್ಯ ಎಂದು ನಮಗೆ ತಿಳಿಸಲಾಗಿತ್ತು. ಇದ್ದಕ್ಕಿದ್ದಂತೆ ಅಂಕದ ಬದಲು ಉತ್ತಮವಾದ ಗೆಲುವಿನ ಸರಾಸರಿ ಹೊಂದಿರುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ ಎಂದು ಹೇಳಲಾಗಿದೆ. ಇದು ತುಂಬಾ ಗೊಂದಲಮಯವಾಗಿದೆ ಎಂದಿದ್ದಾರೆ.
ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಹೊಸ ನಿಯಮ: ಗರಿಷ್ಠ ಅಂಕವಿದ್ದರೂ 2ನೇ ಸ್ಥಾನಕ್ಕೆ ಕುಸಿದ ಭಾರತ
ಈ ನಿಯಮ ಜಾರಿಗೆ ತಂದಿದ್ದು ಏಕೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ಈ ವಿಷಯಗಳನ್ನು ಮೊದಲ ದಿನವೇ ನಮಗೆ ವಿವರಿಸಿದ್ದರೆ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತಿತ್ತು. ಈ ಬಗ್ಗೆ ಐಸಿಸಿಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಬೇಕು ಎಂದು ಕೊಹ್ಲಿ ಹೇಳಿದ್ದಾರೆ.
ಪ್ರಸ್ತುತ ಐಸಿಸಿ ಬಿಡುಗಡೆ ಮಾಡಿರುವ ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ 296 ಅಂಕ ಹೊಂದಿದ್ದರೂ ಸರಣಿಯ ಗೆಲುವಿನ ಸರಾಸರಿಯಲ್ಲಿ ಶೇ. 82.2 ಪಡೆದು ಮೊದಲ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ 3 ಸರಣಿಯನ್ನಾಡಿದ್ದು, 7 ಪಂದ್ಯಗಳಲ್ಲಿ ಗೆಲುವು ಹಾಗೂ 2 ಸೋಲು ಕಂಡಿದೆ. ಭಾರತ ತಂಡ 4 ಸರಣಿಯನ್ನಾಡಿದ್ದು, 7 ಗೆಲುವು ಹಾಗೂ 2 ಸೋಲು ಕಂಡಿದೆ. 360 ಅಂಕ ಹೊಂದಿದ್ದರೂ ಶೇ. 75ರಷ್ಟು ಗೆಲುವಿನ ಸರಾಸರಿ ಇರುವುದರಿಂದ 2ನೇ ಸ್ಥಾನಕ್ಕೆ ಕುಸಿದಿದೆ.