ನವದೆಹಲಿ: ಕೋವಿಡ್-19 ಸೋಂಕಿನಿಂದ ನಿಧನರಾದ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಚೇತನ್ ಚೌಹಾಣ್ ಅವರಿಗೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಗೌರವ ಸಲ್ಲಿಸಿದ್ದಾರೆ.
"ಬಾ.. ಬಾ.. ತಬ್ಬಿಕೊ.. ಹೇಗಿದ್ರೂ ನಾವು ಬದುಕಿನ ನಿಶ್ಚಿತ ಓವರ್ಗಳಲ್ಲಿದ್ದೇವೆ." ಎಂಬುದು ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ನಾವು ಭೇಟಿಯಾದಾಗಲೆಲ್ಲಾ ಚೇತನ್ ಚೌಹಾಣ್ ಶುಭಾಶಯ ತಿಳಿಸುತ್ತಿದ್ದರು ಎಂದು ಗವಾಸ್ಕರ್ ಹಳೆಯ ನೆನಪನ್ನು ಬಿಚ್ಚಿಟ್ಟಿದ್ದಾರೆ.

ಚೇತನ್ ಚೌಹಾಣ್ ಫಿರೋಜ್ ಷಾ ಕೋಟ್ಲಾ ಮೈದಾನದ ಪಿಚ್ ತಯಾರಕರಾಗಿ ಕೆಲಸ ಮಾಡುತ್ತಿದ್ದರು, ಆಗ ನಾವಿಬ್ಬರು ಭೇಟಿಯಾಗುತ್ತಿದ್ದೆವು. ಆಗ ನಾನು ಅವರನ್ನು ತಬ್ಬಿಕೊಂಡು ಇನ್ನೊಂದು ಶತಕದ ಪಾರ್ಟ್ನರ್ ಶಿಪ್ ಆಡಬೇಕು" ಎಂದು ಹೇಳುತ್ತಿದ್ದೆ. ಅದಕ್ಕೆ ಅವರು, ಅರೆ ಬಾಬಾ ಶತಕದ ರೂವಾರಿ ನೀವು, ನಾನಲ್ಲ ಎನ್ನುತಿದ್ದರು ಎಂದು ಹಳೆಯ ಸ್ನೇಹಿತನೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
ಜೀವನದ ನಿಶ್ಚಿತ ಓವರ್‌ಗಳಲ್ಲಿರುವ ಬಗ್ಗೆ ಅವರ ಮಾತುಗಳು ಶೀಘ್ರದಲ್ಲೇ ನಿಜವಾಗುತ್ತವೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಮುಂದಿನ ಬಾರಿ ನಾನು ದೆಹಲಿಗೆ ಹೋದಾಗ ಅವನ ನಗು ಮತ್ತು ಹರ್ಷಚಿತ್ತದ ವಿನೋದವು ಇರುವುದಿಲ್ಲ ಎಂಬುದನ್ನು ನಂಬುವುದು ತುಂಬಾ ಕಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವರಿಗೆ ಹಾಸ್ಯ ಪ್ರಜ್ಞೆಯೂ ಇತ್ತು. ನಾವು ಕ್ರಿಕೆಟ್ ಆಡುವಾಗ ಅತ್ಯಂತ ಅಪಾಯಕಾರಿ ಬೌಲರ್ಗಳನ್ನು ಎದುರಿಸುವ ಸಮಯದಲ್ಲಿ ನಮ್ಮ ನೆಚ್ಚಿನ ಗೀತೆಯಾದ, ಮಸ್ಕುರಾ ಲಡ್ಲೆ ಮಸ್ಕುರಾ (ಸ್ಮೈಲ್ ಮಾಡು ಮುದ್ದು, ಸ್ಮೈಲ್ ಮಾಡು) ಎಂದು ಹಾಡುತ್ತಾ ಸವಾಲು ಎದುರಿಸಲು ಸಜ್ಜಾಗುತ್ತಿದ್ದರು ಎಂದಿದ್ದಾರೆ.