ಡರ್ಬಿ: ಸತತ ಎರಡು ಕೋವಿಡ್ ಟೆಸ್ಟ್ ಪೂರೈಸಿ ಇಂಗ್ಲೆಂಡ್ಗೆ ತೆರಳಿದ್ದ ಮೊಹಮ್ಮದ್ ಅಮೀರ್ ಕ್ವಾರಂಟೈನ್ ಅವಧಿ ಮುಗಿಸಿ ಪಾಕಿಸ್ತಾನ ತಂಡ ಸೇರಿಕೊಂಡಿದ್ದಾರೆ ಎಂದು ಪಿಸಿಬಿ ತಿಳಿಸಿದೆ.
ಅಮೀರ್ ಇಂಗ್ಲೆಂಡ್ನಲ್ಲಿ ಕಡ್ಡಾಯವಾಗಿರುವ 5 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದ್ದು, ಈ ವೇಳೆ ಎರಡು ಬಾರಿ ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದರು. ಅದರಲ್ಲಿ ನೆಗೆಟಿವ್ ವರದಿ ಬಂದ ನಂತರ ಪಾಕಿಸ್ತಾನ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಗುರುವಾರ ಪಿಸಿಬಿ ಮಾಹಿತಿ ನೀಡಿದೆ.
"ಅಮೀರ್ ಲಾಹೋರ್ನಿಂದ ಜುಲೈ 24 ರಂದು ಹೊರಟರು. ಇಂಗ್ಲೆಂಡ್ ಸರ್ಕಾರದ ಮಾರ್ಗದರ್ಶನದಂತೆ 5 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಈ ವೇಳೆ ನಡೆದ 2 ಕೋವಿಡ್ ಪರೀಕ್ಷೆಯಲ್ಲೂ ನೆಗೆಟಿವ್ ವರದಿ ಬಂದಿದೆ" ಎಂದು ಪಿಸಿಬಿ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಈಗಾಗಲೆ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಮೊಹಮ್ಮದ್ ಅಮೀರ್ .ಆಗಸ್ಟ್ 28 ರಿಂದ ಮ್ಯಾಂಚೆಸ್ಟರ್ನ ಬಯೋಸೆಕ್ಯೂರ್ ವಾತಾವಣದಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಮತ್ತೊಬ್ಬ ಯುವ ಬೌಲರ್ ಹ್ಯಾರೀಸ್ ರಾವುಫ್ ಕೂಡ ತಮ್ಮ ಎರಡನೇ ಕೋವಿಡ್ ಟೆಸ್ಟ್ ಮುಗಿಸಿದ್ದು, ಇಂಗ್ಲೆಂಡ್ ತೆರಳಲು ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಅವರು ವಾರಾಂತ್ಯದಲ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳಸಿದ್ದಾರೆ. ಅಲ್ಲಿನ ಪ್ರೋಟೋಕಾಲ್ಗಳನ್ನು ಮುಗಿದ ನಂತರ ಪಾಕ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 5ರ ರಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ತನ್ನ ಮೊದಲ ಪಂದ್ಯವಾಡಲಿದೆ.