ಮುಂಬೈ: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಮಡದಿ ಶನಿವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
2014ರಲ್ಲಿ ಬಾಲ್ಯದ ಗೆಳತಿ ರಾಧಿಕಾರನ್ನು ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ರಹಾನೆ 5 ವರ್ಷಗಳ ಬಳಿಕ ತಂದೆಯಾಗಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿರುವ ರಹಾನೆ, ತಮ್ಮ ಮಗುವಿನ ಮುಖವನ್ನು ನೋಡಲು ಇನ್ನೊಂದು ದಿನ ಕಾಯಬೇಕಾಗಿದೆ. ನಾಳೆ ಮೊದಲ ಟೆಸ್ಟ್ ಪಂದ್ಯಕ್ಕೆ ಕೊನೆಯ ದಿನವಾಗಿದ್ದು, ಒಂದು ವೇಳೆ ಪಂದ್ಯ ಗೆದ್ದರೆ ರಹಾನೆ ಪಾಲಿಗೆ ಡಬಲ್ ಸಂಭ್ರಮವಾಗಲಿದೆ.
ರಹಾನೆಗೆ ಮಾಜಿ ಕ್ರಿಕೆಟರ್ ಹರ್ಭಹನ್ ಸಿಂಗ್ ಟ್ವೀಟ್ ಮಾಡಿ ಶುಭಕೋರಿದ್ದು, ಅಮ್ಮ ಹಾಗೂ ಮಗು ರಾಜಕುಮಾರಿ ಆರೋಗ್ಯವಾಗಿದ್ದಾರೆಂದು ಭಾವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ರಹಾನೆ ಹೆಣ್ಣು ಮಗುವಿನ ತಂದೆಯಾಗುವ ಮೂಲಕ ತಂಡದ ಸಹ ಅಟಗಾರರಾದ ಧೋನಿ, ರೈನಾ, ಭಜ್ಜಿ, ರೋಹಿತ್ ಹಾಗೂ ವಿಹಾರಿ ಸಾಲಿಗೆ ಸೇರಿಕೊಂಡಿದ್ದಾರೆ.