ಮುಂಬೈ: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬಗೆದಷ್ಟೂ ಆಳಕ್ಕಿಳಿಯುತ್ತಿದೆ. ಇದರ ನಡುವೆಯೇ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಮುಂದಾಗಿದ್ದರು ಎನ್ನುವ ಶಾಕಿಂಗ್ ಸುದ್ದಿಯನ್ನು ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಿವೀಲ್ ಮಾಡಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಫಿಕ್ಸಿಂಗ್ ನಡೆಸಲು ಬುಕ್ಕಿಯೊಬ್ಬ ಹೆಸರು ಹೇಳಲಿಚ್ಛಿಸದ ತಂಡದ ಆಟಗಾರರನ್ನು ಸಂಪರ್ಕಿಸಿದ್ದ. ಆದರೆ ಆ ಆಟಗಾರ ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಿಷಯ ರವಾನಿಸಿದ್ದ. ಹೀಗಾಗಿ ಫಿಕ್ಸಿಂಗ್ ನಡೆದಿಲ್ಲ ಎಂದು ಗಂಗೂಲಿ ಬಿಸಿಸಿಐ ವಾರ್ಷಿಕ ಸಭೆ ಬಳಿಕ ಹೇಳಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಫಿಕ್ಸಿಂಗ್ ಬಗ್ಗೆ ಮಾತನಾಡುವ ವೇಳೆ ತಮಿಳುನಾಡು ಪ್ರೀಮಿಯರ್ ಲೀಗ್ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್ ಫಿಕ್ಸಿಂಗ್ ವಿಚಾರವನ್ನೂ ಗಂಗೂಲಿ ಪ್ರಸ್ತಾಪಿಸಿದ್ದಾರೆ.