ಮುಂಬೈ(ಮಹಾರಾಷ್ಟ್ರ): ಟೀಂ ಇಂಡಿಯಾ ವೇಗದ ಬೌಲರ್ ಹಾಗು ಯಾರ್ಕರ್ ಕಿಂಗ್ ಎಂದು ಕರೆಯಲಾಗುವ ಜಸ್ಪ್ರೀತ್ ಬುಮ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ವೊಂದು ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ಅನ್ನು ಅನ್ಫಾಲೋ ಮಾಡಿರುವುದು ಬಿಸಿಬಿಸಿ ಚರ್ಚೆಗೆ ಹಾಟ್ ಟಾಪಿಕ್ ಆಗಿದೆ. ಹಾರ್ದಿಕ್ ಪಾಂಡ್ಯ ಮುಂಬೈಗೆ ಮರಳಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಬುಮ್ರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲು ಆಸಕ್ತಿ ಹೊಂದಿದ್ದಾರೆ ಎಂದೂ ವರದಿಯಾಗಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ.
"ಬುಮ್ರಾ ಅವರಂಥ ಬೌಲರ್ ಅನ್ನು ರೆಡಿ ಮಾಡುವುದು ತುಂಬಾ ಕಷ್ಟ. ಅದು ಸೀಮಿತ ಓವರ್‌ಗಳ ಕ್ರಿಕೆಟ್ ಆಗಿರಲಿ ಅಥವಾ ಟೆಸ್ಟ್ ಸರಣಿಯೇ ಆಗಿರಲಿ, ಅವರು ತಮ್ಮ ಸಹಜ ಬೌಲಿಂಗ್‌ನಿಂದ ಮಿಂಚಿತ್ತಿದ್ದಾರೆ. ಆತ ವಿಶ್ವದ ಅತ್ಯುತ್ತಮ ಬೌಲರ್. ವಿಶ್ವಕಪ್‌ನಲ್ಲಿ ಅವರ ಪ್ರದರ್ಶನವನ್ನು ನೋಡಿದ್ದೇವೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಐದನೇ ಪಂದ್ಯದ ನಾಯಕತ್ವ ವಹಿಸಿದ್ದರು. ಈಗ ಹಾರ್ದಿಕ್ ಅವರಂತಹ ಆಟಗಾರ ಮರಳಿ ಬಂದಿರುವುದು ಬುಮ್ರಾಗೆ ನೋವು ತಂದಿರಬಹುದು. ಪಾಂಡ್ಯ ನಿರ್ಗಮಸಿ ಮತ್ತೆ ಆಗಮಿಸಿದ ಬಳಿಕ ಮುಂಬೈ ಇಂಡಿಯನ್ಸ್ ಸಂಭ್ರಮಿಸುತ್ತಿದೆ. ಆದರೆ, ತಂಡದಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಕಳೆದ ವರ್ಷವೂ ಸಿಎಸ್‌ಕೆಯಲ್ಲಿ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ರವೀಂದ್ರ ಜಡೇಜಾ ಪ್ರಕರಣದಲ್ಲಿ ಆಗಿನ ನಾಯಕ ಎಂ.ಎಸ್.ಧೋನಿ ಮತ್ತು ಮ್ಯಾನೇಜ್‌ಮೆಂಟ್ ತ್ವರಿತವಾಗಿ ಸ್ಪಂದಿಸಿ ಪರಿಸ್ಥಿತಿಯನ್ನು ಸರಿಪಡಿಸಿತ್ತು" ಎಂದರು.
"ಮುಂಬೈ ತಂಡವೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಅವರನ್ನು ಶೀಘ್ರದಲ್ಲೇ ಕೂರಿಸಿ ಮಾತನಾಡಿಸಿ ಸಮಸ್ಯೆ ಪರಿಹರಿಸಬೇಕು. ಆದ್ದರಿಂದ, ಶೀಘ್ರದಲ್ಲೇ ಅವರೊಂದಿಗೆ ಮಾತನಾಡಿ. ಬುಮ್ರಾ ಒಬ್ಬ ಅದ್ಭುತ ವ್ಯಕ್ತಿ. ಅವನು ತೊಂದರೆಗೊಳಗಾದಂತೆ ತೋರುತ್ತಿದ್ದರೆ, ಆಡಳಿತವು ಅದನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ" ಎನ್ನುತ್ತಾರೆ ಶ್ರೀಕಾಂತ್.
ಬುಮ್ರಾ ಇನ್ಸ್ಟಾಗ್ರಾಮ್ನಲ್ಲಿ, "ಕೆಲವೊಮ್ಮೆ ಮೌನವೇ ಅತ್ಯುತ್ತಮ ಉತ್ತರ" ಎಂದು ಬರೆದುಕೊಂಡಿದ್ದರು. ಇದು ಅವರು ತಂಡದಿಂದ ಹೊರಹೋಗಲು ಬಯಸುತ್ತಿದ್ದಾರೆ ಎಂಬ ಸೂಚನೆಯಾಗಿದೆ ಎಂಬ ಅನುಮಾನ ಮೂಡಿಸಿದೆ. ಬುಮ್ರಾ ಮುಂಬೈ ಇಂಡಿಯನ್ಸ್ ತೊರೆಯಲು ನಿರ್ಧರಿಸಿದರೆ, ಅವರು ಹರಾಜಿನಲ್ಲಿ ಭಾರಿ ಬೆಲೆ ಪಡೆಯುವುದು ಖಚಿತ.
ಇದನ್ನೂ ಓದಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಕೆ: ಬಿಸಿಸಿಐ ಘೋಷಣೆ