ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 2022 ರಲ್ಲಿ ಟೆಸ್ಟ್, ಟಿ20, ಏಕದಿನ ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಟೆಸ್ಟ್‌ನಲ್ಲಿ ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬೂಮ್ರಾ, ಏಕದಿನದಲ್ಲಿ ಶ್ರೇಯಸ್ ಅಯ್ಯರ್, ಮೊಹಮದ್ ಸಿರಾಜ್, ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶಕರಾಗಿ ಹೊರಹೊಮ್ಮಿದ್ದಾರೆ.
ಟೆಸ್ಟ್ ಬೆಸ್ಟ್ ಪರ್ಫಾಮರ್ಸ್: ಅತ್ಯುತ್ತಮ ಆಟಗಾರರು ಮತ್ತು ಅವರ ಸಾಧನೆಯ ಅಂಕಿಅಂಶಗಳನ್ನು ಟ್ವೀಟ್ ಮಾಡಿರುವ ಬಿಸಿಸಿಐ, ಟೆಸ್ಟ್ ಮಾದರಿಯಲ್ಲಿ ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಉತ್ತಮ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಪಂತ್ 2022 ರಲ್ಲಿ 7 ಪಂದ್ಯಗಳಲ್ಲಿ 680 ರನ್ ಬಾರಿಸಿ, ಅತ್ಯಧಿಕ ಭಾರತದ ಸ್ಕೋರರ್ ಆಗಿದ್ದಾರೆ. 61.81 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, 146 ಗರಿಷ್ಠ ರನ್ನೊಂದಿಗೆ 4 ಅರ್ಧಶತಕ, 2 ಶತಕ ಬಾರಿಸಿದ್ದಾರೆ.
ಬೌಲಿಂಗ್ನಲ್ಲಿ ಗಾಯಕ್ಕೀಡಾಗಿ ಹಲವು ದಿನಗಳಿಂದ ಕ್ರಿಕೆಟ್ನಿಂದ ದೂರವಿರುವ ಜಸ್ಪ್ರೀತ್ ಬೂಮ್ರಾ 5 ಪಂದ್ಯಗಳಲ್ಲಿ 22 ವಿಕೆಟ್ ಕಿತ್ತಿದ್ದಾರೆ. 47 ರನ್ಗೆ 8 ವಿಕೆಟ್ ಪಡೆದಿದ್ದು ಗರಿಷ್ಠ ಪ್ರದರ್ಶನವಾಗಿದ್ದರೆ, 2 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಏಕದಿನದ ಉತ್ತಮ ಆಟಗಾರರು: 50 ಓವರ್ಗಳ ಮಾದರಿಯಲ್ಲಿ ಸಿಕ್ಕ ಅವಕಾಶವನ್ನು ಬಾಚಿಕೊಂಡಿರುವ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ವರ್ಷದಲ್ಲಿ ಆಡಿದ 17 ಪಂದ್ಯಗಳಲ್ಲಿ 724 ರನ್ ಗಳಿಸಿದ್ದಾರೆ. 55.69 ರ ಸರಾಸರಿಯಲ್ಲಿ 113 ಗರಿಷ್ಠ ರನ್ ಜೊತೆಗೆ 6 ಅರ್ಧಶತಕ, 1 ಶತಕ ಬಾರಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹಮದ್ ಸಿರಾಜ್ 15 ಪಂದ್ಯದಲ್ಲಿ 24 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಟಿ20ಯಲ್ಲಿ ಬೆಳಗಿದ ಸೂರ್ಯ: ಪ್ರಸ್ತುತ ಭಾರತ ತಂಡದ ಡ್ಯಾಶಿಂಗ್ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಚುಟುಕು ಮಾದರಿಯಲ್ಲಿ ಉತ್ತಮ ಲಯದಲ್ಲಿದ್ದಾರೆ. 31 ಟಿ20 ಪಂದ್ಯದಲ್ಲಿ 1164 ರನ್ ಬಾರಿಸಿದ್ದಾರೆ. 117 ಗರಿಷ್ಠ ಸ್ಕೋರ್, 9 ಅರ್ಧಶತಕ, 2 ಶತಕ ಸಿಡಿಸಿದ್ದಾರೆ. ಅಲ್ಲದೇ ವರ್ಷದಲ್ಲಿ 1 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಆಟಗಾರರಾಗಿದ್ದಾರೆ. ಬೌಲಿಂಗ್ನಲ್ಲಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದು, 32 ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ. 4 ರನ್ಗೆ 5 ವಿಕೆಟ್ ಕಿತ್ತಿದ್ದು ಗರಿಷ್ಠ ಆಟವಾಗಿದೆ.
ಶ್ರೀಲಂಕಾ ವಿರುದ್ಧ ಜನವರಿ 3 ರಿಂದ ಟಿ20 ಸರಣಿ ಆಡುವ ಮೂಲಕ ತವರಿನ ಚರಣವನ್ನು ಭಾರತ ತಂಡ ಆರಂಭಿಸಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು ಭಾರತ ಪ್ರವಾಸ ಕೈಗೊಳ್ಳಲಿವೆ.
ಇದನ್ನೂ ಓದಿ: ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಗಾಯಾಳು ರಿಷಬ್ ಪಂತ್ ಔಟ್?: ರೇಸ್ನಲ್ಲಿ ಉಪೇಂದ್ರ, ಭರತ್