ಢಾಕಾ( ಬಾಂಗ್ಲಾದೇಶ): ಪ್ರತಿಭಟನೆ ಹಿನ್ನೆಲೆ ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಯು ಭಾರತದ ವಿರುದ್ಧದ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಢಾಕಾದಿಂದ ಸ್ಥಳಾಂತರಿಸಿದೆ. ರಾಜಧಾನಿ ಢಾಕಾ ಸ್ಥಳದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿರುವುದಿಂದ ನಿಗದಿಯಾಗಿದ್ದ ಏಕದಿನ ಪಂದ್ಯವನ್ನು ಬೇರೆ ಕಡೆ ಸ್ಥಳಾಂತರಿಸಿರುವುದಾಗಿ ಬುಧವಾರ ಕ್ರಿಕೆಟ್ ಮಂಡಳಿ ತಿಳಿಸಿದೆ.
ಅಂತಾರಾಷ್ಟ್ರೀಯ ಏಕದಿನ ಪಂದ್ಯವು ಈ ಮೊದಲು ಹೇಳಿದ್ದ ಢಾಕಾದಲ್ಲಿಯೇ ನಡೆಯಬೇಕಿತ್ತು. ಆದರೆ, ಪ್ರತಿಭಟನಾ ಬಿಸಿಯಿಂದ ಇದೀಗ ಕರಾವಳಿ ನಗರಿ ಚಿತ್ತಗಾಂಗ್‌ಗೆ ಸ್ಥಳಾಂತರಿಸಲಾಗಿದೆ ಎಂದು ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
2015ರ ನಂತರ ಟೀಂ ಇಂಡಿಯಾ ಬಾಂಗ್ಲಾದೇಶದ ಪ್ರವಾಸ ಕೈಗೊಂಡಿದ್ದು, ಡಿ. 4 ರಿಂದ ಏಕದಿನ ಅಂತಾರಾಷ್ಟ್ರೀಯ ಸರಣಿಗೆ ಅಣಿಯಾಗಲಿದೆ. ಎಲ್ಲ ಮೂರೂ ಪಂದ್ಯಗಳು ಢಾಕಾದಲ್ಲಿ ನಡೆಯಬೇಕಿತ್ತು. ಆದರೆ, ಡಿ. 10 ರಂದು ನಡೆಯಲಿರುವ ಮೂರನೇ ಪಂದ್ಯವನ್ನು ಕೆಲವು ಕಾರಣಾಂತರಗಳಿಂದ ಢಾಕಾದಿಂದ ಚಿತ್ತಗಾಂಗ್‌ಗೆ ಸ್ಥಳಾಂತರಿಸಲಾಗಿದೆ.
ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸೇರಿದಂತೆ ವಿವಿಧ ಸಂಘಟನೆಗಳು ಅಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಸಾವಿರಾರು ಜನ ಢಾಕಾದಲ್ಲಿ ಬೀದಿಗಿಳಿಯುವ ನಿರೀಕ್ಷೆಯಿದೆ. ಬಹಳ ದಿನಗಳಿಂದ ಈ ಪ್ರತಿಭಟನೆ ನಡೆಯುತ್ತಿದ್ದು, ಢಾಕಾದಲ್ಲಿ ಇದು ತೀವ್ರ ಸ್ವರೂಪ ಪಡೆಯಲಿದೆ. ಆದುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿ ತಿಳಿಸಿದೆ.
ಚಿತ್ತಗಾಂಗ್‌ನಲ್ಲಿ ಮೊದಲು ಒಂದು ಟೆಸ್ಟ್ ಪಂದ್ಯಕ್ಕೆ ಮಾತ್ರ ಆತಿಥ್ಯ ವಹಿಸಬೇಕಿತ್ತು. ಇದೀಗ ಇದೇ ಸ್ಥಳದಲ್ಲಿ ಒಂದು ಏಕದಿನ ಪಂದ್ಯವನ್ನು ನಡೆಸಲಾಗುತ್ತದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಕಾರ್ಯಾಚರಣೆ ಮುಖ್ಯಸ್ಥ ಜಲಾಲ್ ಯೂನಸ್ ಬುಧವಾರ ತಿಳಿಸಿದ್ದಾರೆ.
ಪ್ರತಿಭಟನೆಯಿಂದ ತಡವಾಗಿ ಪಂದ್ಯದ ಸ್ಥಳ ಬದಲಾವಣೆಗೆ ಕಾರಣವಾಯಿತು ಎಂಬುದರ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಆದರೆ, ಪ್ರತಿಭಟನಾ ಬಿಸಿಯನ್ನು ತಪ್ಪಿಸಲು ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಲಂಕಾ ಆಲ್‌ರೌಂಡರ್ ಚಮಿಕಾ ಕರುಣಾರತ್ನೆಗೆ ಕ್ರಿಕೆಟ್‌ನಿಂದ ಒಂದು ವರ್ಷ ನಿಷೇಧ!