ಹೈದರಾಬಾದ್: 2022ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸ್ಟಾರ್ ಆಟಗಾರರ ಖರೀದಿಸುವ ಯೋಜನೆಯಲ್ಲಿದ್ದ 10 ಫ್ರಾಂಚೈಸಿಗಳಿಗೆ ಆಸ್ಟ್ರೇಲಿಯಾ ಆಟಗಾರರ ಅಲಭ್ಯತೆ ದೊಡ್ಡ ಆಘಾತ ತಂದಿದೆ. 47 ಆಟಗಾರರು ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಇದರಲ್ಲಿ ಪ್ರಮುಖ ಆಟಗಾರರು ಐಪಿಎಲ್ ವೇಳೆ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದರಿಂದ ಫ್ರಾಂಚೈಸಿ ಮಾಲೀಕರಿಗೆ ದೊಡ್ಡ ತಲೆನೋವು ತಂದಿದೆ.
2 ಹೊಸ ತಂಡಗಳು ಸೇರ್ಪಡೆಯೊಡನೆ ಶ್ರೀಮಂತ ಕ್ರಿಕೆಟ್ ಲೀಗ್ 74 ಪಂದ್ಯಗಳಿಗೆ ಏರಿಕೆಯಾಗಿದೆ. ಹಾಗಾಗಿ ಈ ಟೂರ್ನಮೆಂಟ್ 2 ತಿಂಗಳ ಅವಧಿಯಲ್ಲಿ ನಡೆಯಲಿದೆ. ಮೆಗಾ ಹರಾಜಿಗೆ ಮೂರು ದಿನಗಳಿರುವಾಗ ಕ್ರಿಕೆಟ್ ಆಸ್ಟ್ರೇಲಿಯಾ ಐಪಿಎಲ್ಗಾಗಿ ನಮ್ಮ ಯಾವುದೇ ಆಟಗಾರರನ್ನು ರಾಷ್ಟ್ರೀಯ ಕರ್ತವ್ಯವನ್ನು ತ್ಯಜಿಸಲು ಬಿಡುವುದಿಲ್ಲ ಎಂದು ತಿಳಿಸಿದೆ.
ಆಸ್ಟ್ರೇಲಿಯಾ ತಂಡ ಮಾರ್ಚ್ ಮತ್ತು ಏಪ್ರಿಲ್ ವೇಳೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 3 ಏಕದಿನ, 3 ಟೆಸ್ಟ್ ಮತ್ತು ಒಂದು ಟಿ-20 ಪಂದ್ಯವನ್ನಾಡಲಿದೆ. ಈ ಪ್ರವಾಸಕ್ಕೆ ಆಸ್ಟ್ರೇಲಿಯಾ ಆಯ್ಕೆಗಾರರು ಸಂಪೂರ್ಣ ಬಲಿಷ್ಠ ತಂಡವನ್ನು ಆಯ್ಕೆ ಮಾಡಿರುವುದು ಐಪಿಎಲ್ ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವು ತಂದಿದೆ.
ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್ ಐಪಿಎಲ್ ಮೆಗಾ ಹರಾಜಿನಲ್ಲಿ ಮಾರ್ಕ್ಯೂ ಪಟ್ಟಿಯಲ್ಲಿದ್ದಾರೆ. ಇವರು ಪಾಕಿಸ್ತಾನ ಟೆಸ್ಟ್ ತಂಡದಲ್ಲಿರುವುದರಿಂದ ಐಪಿಎಲ್ನ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಸಿಎ ಮಂಡಳಿಯ ಈ ನಿರ್ಧಾರದಿಂದ ನಾಯಕನ ಅಯ್ಕೆಗೆ ಕಸರತ್ತು ನಡೆಸುತ್ತಿರುವ ಆರ್ಸಿಬಿ, ಕೆಕೆಆರ್ ಮತ್ತು ಪಂಜಾಬ್ ತಂಡಗಳಿಗೆ ನಿರಾಶೆ ತಂದಿದೆ.
ಟೆಸ್ಟ್ ಸರಣಿಯ ನಂತರ ಏಕದಿನ ಸರಣಿ ಇರುವುದರಿಂದ ವಾರ್ನರ್ ಮತ್ತು ಕಮಿನ್ಸ್ ಐಪಿಎಲ್ನ ಮೊದಲಾರ್ಧದ ಬಹುತೇಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಪ್ರವಾಸ ಮುಗಿಸಿ ಬಂದರೂ 6 ದಿನಗಳ ಕಡ್ಡಾಯ ಕ್ವಾರಂಟೈನ್ ಇರುವುದರಿಂದ ಐಪಿಎಲ್ನಲ್ಲಿ ಆಸ್ಟ್ರೇಲಿಯನ್ ಆಟಗಾರರು ಗೈರಾಗಲಿದ್ದಾರೆ. ಈ ಕಾರಣದಿಂದ ಫ್ರಾಂಚೈಸಿ ಆಸ್ಟ್ರೇಲಿಯನ್ ಆಟಗಾರರ ಖರೀದಿಸಲು ಚಿಂತೆಗೀಡಾಗುತ್ತಿದೆ.
ಕಮಿನ್ಸ್, ವಾರ್ನರ್ ಜೊತೆಗೆ ಸ್ಟೀವ್ ಸ್ಮಿತ್, ಜೋಶ್ ಹೇಜಲ್ವುಡ್, ಮಿಚೆಲ್ ಮಾರ್ಷ್, ಆ್ಯರೋನ್ ಫಿಂಚ್, ಆ್ಯಡಂ ಜಂಪಾ ಕೂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ:ಭಾರತದವನಾಗಿದ್ದರೆ ನನಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತಿರಲಿಲ್ಲವೇನೋ: ಎಬಿ ಡಿ ವಿಲಿಯರ್ಸ್