ಮೆಲ್ಬೊರ್ನ್(ಆಸ್ಟ್ರೇಲಿಯಾ): ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಅರಾಜಕತೆಯಿಂದ ಬಳಲುತ್ತಿರುವ ಶ್ರೀಲಂಕಾ ದೇಶಕ್ಕೆ ಆಸ್ಟ್ರೇಲಿಯಾ ಪುರುಷ ಕ್ರಿಕೆಟಿಗರು ಸಹಾಯಹಸ್ತ ಚಾಚಿದ್ದಾರೆ. ಕ್ರಿಕೆಟ್ ಸರಣಿಯಲ್ಲಿ ತಾವು ಗೆದ್ದ ಪ್ರಶಸ್ತಿಯ ಹಣವನ್ನು ದಾನವಾಗಿ ನೀಡಲು ಮುಂದಾಗಿದ್ದಾರೆ. ಕಳೆದ ಜೂನ್-ಜುಲೈ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ನಡೆದ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಆಸೀಸ್ ತಂಡ ಗೆಲುವು ದಾಖಲಿಸಿತ್ತು.
ಶ್ರೀಲಂಕಾದಲ್ಲಿ ಪ್ರವಾಸದಲ್ಲಿ ಆಸೀಸ್ ತಂಡ ಟೆಸ್ಟ್, ಟಿ20 ಪಂದ್ಯಗಳ ಸರಣಿ ಆಡಿತ್ತು. ಈ ಸರಣಿಯಲ್ಲಿ ತಾವು ಗೆದ್ದಿರುವ ಒಟ್ಟು $45,000 ಹಣವನ್ನೀಗ UNICEFಗೆ ನೀಡಿದೆ. ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಸೀಮಿತ ಓವರ್ಗಳ ನಾಯಕ ಆ್ಯರನ್ ಫಿಂಚ್ ಈ ನಿರ್ಧಾರ ಕೈಗೊಂಡಿದ್ದಾರೆ. ಲಂಕಾದ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರೆ ಸೇವೆಗಳಿಗೆ ಇದು ಬಳಕೆಯಾಗಲಿದೆ.
ಆಸ್ಟ್ರೇಲಿಯಾದ UNICEF ರಾಯಭಾರಿ, ಕ್ರಿಕೆಟಿಗ ಕಮ್ಮಿನ್ಸ್ ಮಾತನಾಡಿ, ಶ್ರೀಲಂಕಾ ಯಾವ ರೀತಿಯ ತೊಂದರೆ ಅನುಭವಿಸುತ್ತಿದೆ ಎಂಬುದು ನಮಗೆ ಗೊತ್ತಿದೆ. ತಂಡದ ಪರಿಸ್ಥಿತಿ ನೋಡಿದಾಗಲೂ ಈ ಬಗ್ಗೆ ನಮಗೆ ಅರಿವಾಗಿದೆ. ಇದೀಗ ಅಲ್ಲಿನ ಮಕ್ಕಳು ಹಾಗೂ ಕೆಲ ಕುಟುಂಬಗಳನ್ನು ಬೆಂಬಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಶ್ರೀಲಂಕಾ ರಾಯಭಾರಿ ಪ್ರತಿಕ್ರಿಯಿಸಿ, ಆಸ್ಟ್ರೇಲಿಯಾ-ಶ್ರೀಲಂಕಾ ಬಾಂಧವ್ಯ ಉತ್ತಮವಾಗಿದೆ. ಕ್ರಿಕೆಟಿಗರ ನಿರ್ಧಾರಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
2021ರ ಕೋವಿಡ್ ಸಂದರ್ಭದಲ್ಲಿ ಭಾರತ ಆಕ್ಸಿಜನ್ ಸಮಸ್ಯೆಗೊಳಗಾಗಿದ್ದ ಸಂದರ್ಭದಲ್ಲಿಯೂ ಕಮ್ಮಿನ್ಸ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಭಾರತಕ್ಕೆ ಸಹಾಯ ಮಾಡಿತ್ತು. ಆಮ್ಲಜನಕ ಪೂರೈಕೆಗಾಗಿ $50,000 ದೇಣಿಗೆ ನೀಡಿತ್ತು.