ಶಾರ್ಜಾ(ಯುಎಇ): ಕ್ರಿಕೆಟ್ ಶಿಶು ಹಾಂಗ್ಕಾಂಗ್ ವಿರುದ್ಧ ಭರ್ಜರಿ 155ರನ್ಗಳ ಗೆಲುವು ದಾಖಲು ಮಾಡಿರುವ ಪಾಕಿಸ್ತಾನ ಏಷ್ಯಾಕಪ್ನಲ್ಲಿ ಸೂಪರ್ 4 ಹಂತಕ್ಕೆ ಲಗ್ಗೆ ಹಾಕಿದೆ. ಹೀಗಾಗಿ, ನಾಳೆ ಭಾರತ ತಂಡದ ಸವಾಲನ್ನು ಮತ್ತೊಮ್ಮೆ ಎದುರಿಸಲಿದೆ. ಸೂಪರ್ 4 ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕ್ ತಂಡಗಳು ಕಣಕ್ಕಿಳಿಯಲಿವೆ.
ಶುಕ್ರವಾರ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 193ರನ್ಗಳಿಸಿತು. ಈ ಗುರಿ ಬೆನ್ನತ್ತಿದ್ದ ಹಾಂಗ್ಕಾಂಗ್ ತಂಡ 11 ಓವರ್ಗಳಲ್ಲಿ ಕೇವಲ 38ರನ್ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ, 155ರನ್ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದೆ.
ಏಷ್ಯಾಕಪ್ನಲ್ಲಿ ಕಳೆದ ಭಾನುವಾರ ಪಾಕಿಸ್ತಾನ ಹಾಗೂ ಭಾರತ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದಾಟಕ್ಕೆ ಪಾಕ್ 5ವಿಕೆಟ್ಗಳ ಸೋಲು ಕಂಡಿತ್ತು. ಇದೀಗ, ನಾಳೆ ಮತ್ತೊಂದು ಸೂಪರ್ ಸಂಡೇ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಅದಕ್ಕಾಗಿ ದುಬೈನಲ್ಲಿ ವೇದಿಕೆ ಸಿದ್ಧವಾಗಿದೆ. ಭಾರತ-ಪಾಕಿಸ್ತಾನ 2012-2013ರಿಂದ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಆಡುತ್ತಿಲ್ಲ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿಯೋಜನೆಯ ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
ಇದನ್ನೂ ಓದಿ: Asia Cup 2022: ಪಾಕ್ ವಿರುದ್ಧ ಅಬ್ಬರಿಸಿದ ಪಾಂಡ್ಯ.. ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತ
ಏಷ್ಯಾಕಪ್ 2022 ಸೂಪರ್ 4 ವೇಳಾಪಟ್ಟಿ
- ಸೆಪ್ಟೆಂಬರ್ 3, ಶಾರ್ಜಾದಲ್ಲಿ ಶ್ರೀಲಂಕಾ vs ಅಫ್ಘಾನಿಸ್ತಾನ
- ಸೆಪ್ಟೆಂಬರ್ 4, ದುಬೈನಲ್ಲಿ ಭಾರತ vs ಪಾಕಿಸ್ತಾನ
- ಸೆಪ್ಟೆಂಬರ್ 6,ದುಬೈನಲ್ಲಿ ಭಾರತ vs ಶ್ರೀಲಂಕಾ
- ಸೆಪ್ಟೆಂಬರ್ 7, ದುಬೈನಲ್ಲಿ ಪಾಕಿಸ್ತಾನ vs ಅಫ್ಘಾನಿಸ್ತಾನ
- ಸೆಪ್ಟೆಂಬರ್ 8, ದುಬೈನಲ್ಲಿ ಭಾರತ vs ಅಫ್ಘಾನಿಸ್ತಾನ
- ಸೆಪ್ಟೆಂಬರ್ 9, ದುಬೈನಲ್ಲಿ ಶ್ರೀಲಂಕಾ vs ಪಾಕಿಸ್ತಾನ
- ಸೆಪ್ಟೆಂಬರ್ 11, ದುಬೈನಲ್ಲಿ ಫೈನಲ್ ಪಂದ್ಯ
ಏಷ್ಯಾಕಪ್ನಿಂದ ಜಡೇಜಾ ಔಟ್; ಅಕ್ಷರ್ ಇನ್: ಮೊಣಕಾಲು ಗಾಯಕ್ಕೊಳಗಾಗಿರುವ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ, ಅವರ ಸ್ಥಾನಕ್ಕೆ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ಆಗಸ್ಟ್ 28ರಂದು ಪಾಕ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ 35ರನ್ ಸಿಡಿಸಿದ್ದರು.