ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡು ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿರುವ ಮಾರ್ಕ್ ವುಡ್ ಸ್ಥಾನಕ್ಕೆ ಲಖನೌ ತಂಡ ಮತ್ತೋರ್ವ ವೇಗಿಯನ್ನ ಕರೆತಂದಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಆ್ಯಂಡ್ರ್ಯೂ ಟೈ ರಾಹುಲ್ ಬಳಗ ಸೇರಿಕೊಳ್ಳಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಫ್ರಾಂಚೈಸಿ ಮಾಹಿತಿ ಹಂಚಿಕೊಂಡಿದೆ.
ಫೆಬ್ರವರಿಯಲ್ಲಿ ನಡೆದ ಮೆಗಾ ಐಪಿಎಲ್ ಹರಾಜಿನಲ್ಲಿ ಮಾರ್ಕ್ವುಡ್ ಅವರನ್ನು ಲಖನೌ ಸೂಪರ್ ಜೈಂಟ್ಸ್ 7.5 ಕೋಟಿ ರೂಪಾಯಿಗೆ ಆಯ್ಕೆ ಮಾಡಿಕೊಂಡಿತ್ತು. ಆದರೆ, ಕಳೆದ ವಾರ ನಡೆದ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದ ವೇಳೆ ಅವರಿಗೆ ಮೊಣಕೈ ನೋವು ಕಾಣಿಸಿತ್ತು. ಫಿಟ್ನೆಸ್ ಪರೀಕ್ಷೆ ವೇಳೆ ಅವರು ಬೌಲಿಂಗ್ ಮಾಡಿದಾಗ ಅತಿಯಾದ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಐಪಿಎಲ್ನಿಂದ ಹೊರಗುಳಿಯುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: Ipl 2022 : ಮೊಣಕೈ ಗಾಯದಿಂದ ಸೂಪರ್ ಜೈಂಟ್ಸ್ ತಂಡದಿಂದ ಹೊರಗುಳಿಯಲಿರುವ ಮಾರ್ಕ್ವುಡ್
ಇದರ ಬೆನ್ನಲ್ಲೇ ಹೊಸ ಆಟಗಾರನ ಹುಡುಕಾಟದಲ್ಲಿ ಮಗ್ನವಾಗಿದ್ದ ಲಖನೌ ತಂಡ ಬಾಂಗ್ಲಾದೇಶದ ವೇಗಿ ತಸ್ಕಿನ್ ಅಹ್ಮದ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತು. ಆದರೆ, ಬಾಂಗ್ಲಾ ಕ್ರಿಕೆಟ್ ಬೋರ್ಡ್ನಿಂದ ಎನ್ಒಸಿ ಸಿಗದ ಕಾರಣ ಇದೀಗ ಆ್ಯಂಡ್ರ್ಯೂ ಟೈಗೆ ಮಣೆ ಹಾಕಿದೆ. ಐಪಿಎಲ್ನಲ್ಲಿ ಟೈ ಈಗಾಗಲೇ 27 ಪಂದ್ಯಗಳನ್ನಾಡಿರುವ ವೇಗಿ 40 ವಿಕೆಟ್ ಪಡೆದುಕೊಂಡಿದ್ದಾರೆ.