ದುಬೈ: ಭಾರತ ಕಿರಿಯರ ತಂಡ ಸೋಮವಾರ ನಡೆದ ಅಂಡರ್ 19 ಏಷ್ಯಾಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 4 ವಿಕೆಟ್ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ದುಬೈನ ಐಸಿಸಿ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಮಾಡಿದ್ದ ಅಫ್ಘಾನಿಸ್ತಾನ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 259 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ನಾಯಕ ಸುಲಿಮನ್ ಸಫೀ 86 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 73, ಇಜಾಮ್ ಅಹ್ಮದ್ ಅಹ್ಮದ್ಝಾಯ್ 68 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 1 ಬೌಂಡರಿ ಸಹಿತ ಅಜೇಯ 86 ರನ್ಗಳಿಸಿದ್ದರು.
ಭಾರತದ ಪರ ವಿಕಿ ಒಸ್ತ್ವಲ್ 35ಕ್ಕೆ 1, ಕೌಶಾಲ್ ತಾಂಬೆ 25ಕ್ಕೆ1, ರಾಜ್ ಬಾವಾ 66ಕ್ಕೆ1 ಮತ್ತು ರಾಜವರ್ಧನ್ 74ಕ್ಕೆ 1 ವಿಕೆಟ್ ಪಡೆದಿದ್ದರು. 260 ರನ್ಗಳನ್ನು ಬೆನ್ನಟ್ಟಿದ ಭಾರತ ತಂಡ ಇನ್ನೂ 10 ಎಸೆತಗಳಿರುವಂತೆ ಗುರಿ ತಲುಪಿತು. ಆರಂಭಿಕರಾದ ಹರ್ನೂನ್ ಸಿಂಗ್ 74 ಎಸೆಗಳಲ್ಲಿ 9 ಬೌಂಡರಿ ಸಹಿತ 65 ರನ್, ಅಂಗ್ಕ್ರಿಸ್ ರಘವಂಶಿ 35ರನ್ಗಳಿಸಿ ಮೊದಲ ವಿಕೆಟ್ಗೆ ಶತಕದ ಆರಂಭ ಒದಗಿಸಿಕೊಟ್ಟರು.
ನಾಯಕ ಯಶ್ ಧುಲ್ 26, ನಿಶಾಂತ್ ಸಿಂಧು 19, ರಾಜ್ ಬಾವಾ ಅಜೇಯ 43, ಕೌಶಾಲ್ ತಾಂಬೆ ಅಜೇಯ 35 ರನ್ಗಳಿಸಿ ತಂಡವನ್ನು ಸೆಮಿಫೈನಲ್ಗೆ ಕೊಂಡೊಯ್ದರು. ಎ ಗುಂಪಿನಲ್ಲಿ ಪಾಕಿಸ್ತಾನ ಮತ್ತು ಭಾರತ ತಂಡಗಳು ಸೆಮಿಪೈನಲ್ ಪ್ರವೇಶಿಸಿದವು.
ಈಗಾಗಲೆ ಬಿ ಗುಂಪಿನಲ್ಲಿ ತಲಾ 2 ಗೆಲುವು ಸಾಧಿಸಿರುವ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕಿರಿಯರ ತಂಡಗಳು ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆಯಾದರೂ, ಅಗ್ರಸ್ಥಾನಕ್ಕಾಗಿ ನಾಳೆ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಯಲ್ಲಿ ಭಾರತ ತಂಡದೊಂದಿಗೆ ಸೆಣಸಾಡಲಿದೆ.
ಇದನ್ನೂ ಓದಿ:ಅಮೆರಿಕಾದಲ್ಲಿ ಕ್ರಿಕೆಟ್ ಆಡುವ ಸಲುವಾಗಿ ನಿವೃತ್ತಿ ಘೋಷಿಸಿದ ಭಾರತೀಯ ಡೊಮೆಸ್ಟಿಕ್ ಕ್ರಿಕೆಟರ್