ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ (2nd Test) ಟ್ರಿನಿಡಾಡ್‌ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫಿಲ್ಡಿಂಗ್ ಆಯ್ದುಕೊಂಡಿದೆ. ಇನ್ನು ಈ ಎರಡನೇ ಟೆಸ್ಟ್ನಲ್ಲಿ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಕೆಲ ಬದಲಾವಣೆ ಮಾಡಿದೆ. ಮುಖೇಶ್ ಕುಮಾರ್ಗೆ ಟೀಂ ಇಂಡಿಯಾ ಅವಕಾಶ ನೀಡಿದೆ. ಮುಖೇಶ್ ಭಾರತದ ಪರ ಚೊಚ್ಚಲ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ.
ಮುಖೇಶ್ ಅವರು ಇದುವರೆಗೆ ದೇಶೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಮುಖೇಶ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಆಡಿ ಮಿಂಚಿದ್ದಾರೆ. ಟಾಸ್ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿ, ಶಾರ್ದೂಲ್ ಠಾಕೂರ್ ಫಿಟ್ ಆಗಿಲ್ಲ. ಮುಖೇಶ್ ಅವರು ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟ್ವೀಟ್ ಮಾಡಿ ಮುಖೇಶ್ ಅವರನ್ನು ಅಭಿನಂದಿಸಿದೆ. ಮುಖೇಶ್ ಅವರ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ, "ಮುಖೇಶ್ ಕುಮಾರ್ ಅವರಿಗೆ ಅಭಿನಂದನೆಗಳು" ಎಂದು ಬೋರ್ಡ್ ಬರೆದಿದೆ.
ಮುಖೇಶ್ ಬಲಗೈ ಮಧ್ಯಮದ ವೇಗದ ಬೌಲರ್. ದೇಶೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಖೇಶ್ 70 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ 149 ವಿಕೆಟ್ ಪಡೆದಿದ್ದಾರೆ. ಈ ಸಮಯದಲ್ಲಿ, ಅವರ ಇನ್ನಿಂಗ್ಸ್‌ನಲ್ಲಿ 40 ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದದ್ದು, ಅತ್ಯುತ್ತಮ ಪ್ರದರ್ಶನವಾಗಿದೆ.
ಮುಖೇಶ್ ಅವರು ದೇಶೀಯ ಪಂದ್ಯಗಳಲ್ಲಿ 6 ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಮುಖೇಶ್ 24 ಲಿಸ್ಟ್ ಎ ಪಂದ್ಯಗಳಲ್ಲಿ 26 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಟಿ-20 ಪಂದ್ಯಗಳಲ್ಲಿ 32 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನ ಕೊನೆಯ ಸೀಸನ್‌ನಲ್ಲಿ ಮುಖೇಶ್‌ಗೆ ಆಡುವ ಅವಕಾಶ ಸಿಕ್ಕಿತ್ತು. ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದರು. ಐಪಿಎಲ್ 2023ರ 10 ಪಂದ್ಯಗಳಲ್ಲಿ ಮುಖೇಶ್ 7 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ 30 ರನ್ ನೀಡಿ 2 ವಿಕೆಟ್ ಪಡೆದದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.
ಬ್ಯಾಟಿಂಗ್ ಆರಂಭಿಸಿದ ಭಾರತ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಈಗಾಗಲೇ 50ಕ್ಕೂ ಹೆಚ್ಚು ರನ್ಗಳನ್ನು ಕಲೆ ಹಾಕಿದೆ. ಭಾರತದ ಪರ ನಾಯಕ ರೋಹಿತ್ ಶರ್ಮಾ 27 ರನ್ ಕಲೆ ಹಾಕಿದ್ರೆ, ಆರಂಭಿಕ ಆಟಗಾರ ಜೈಸ್ವಾಲ್ 26 ರನ್ಗಳನ್ನು ಕಲೆ ಹಾಕಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಭಾರತ ತಂಡ 13 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೆ 57 ರನ್ಗಳನ್ನು ಕಲೆ ಹಾಕಿದೆ.
ತಂಡಗಳು: ಭಾರತ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆ), ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಮುಕೇಶ್ ಕುಮಾರ್, ಮೊಹಮ್ಮದ್ ಸಿರಾಜ್.
ವೆಸ್ಟ್ ಇಂಡೀಸ್: ಕ್ರೈಗ್ ಬ್ರಾಥ್‌ವೈಟ್(ಸಿ), ಟಾಗೆನರೈನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥಾನಾಜೆ, ಜೋಶುವಾ ಡಾ ಸಿಲ್ವಾ (ವಿಕೆ), ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೋಮೆಲ್ ವಾರಿಕಾನ್, ಶಾನನ್ ಗೇಬ್ರಿಯಲ್.
ಮೊದಲ ಟೆಸ್ಟ್ನಲ್ಲಿ ಭಾರತಕ್ಕೆ ಇನ್ನಿಂಗ್ಸ್ ಗೆಲುವು: ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ಇನ್ನಿಂಗ್ಸ್ ಮತ್ತು 141 ರನ್‌ಗಳ ಬೃಹತ್ ಅಂತರದಿಂದ ಗೆಲುವು ದಾಖಲಿಸಿತ್ತು. ಈ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿದೆ.