ಲಾಕ್ಡೌನ್ನಿಂದಾಗಿ ಧಾರಾವಾಹಿಗಳ ಶೂಟಿಂಗ್, ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿವೆ. ಕೊರೊನಾ ಎಂಬ ಮಹಾಮಾರಿ ಹರಡದಂತೆ ತಡೆಯಲು ಲಾಕ್ಡೌನ್ ಜಾರಿಯಲ್ಲಿರೋದ್ರಿಂದಾಗಿ ಎಲ್ಲರೂ ಕೂಡ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಇದೀಗ ಒಂದೂವರೆ ತಿಂಗಳಿನ ಬಳಿಕ ಧಾರಾವಾಹಿಯ ಶೂಟಿಂಗ್ ನಡೆಸಲು ಅನುಮತಿ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಅದಕ್ಕೆ ಸರ್ಕಾರ ಅಸ್ತು ಎಂದಿದೆ.
ಒಂದೂವರೆ ತಿಂಗಳಿನ ಬಳಿಕ ಶೂಟಿಂಗ್ಗೆ ಅನುಮತಿ ದೊರಕಿರುವುದು ನಿಜಕ್ಕೂ ತುಂಬಾ ಸಂತಸವಾಗುತ್ತಿದೆ ಎನ್ನುತ್ತಾರೆ ನಿರ್ದೇಶಕಿ ಶ್ರುತಿ ನಾಯ್ಡು. ಶೂಟಿಂಗ್ ಅನುಮತಿಯೇನೋ ದೊರೆಯಿತು. ಆದರೆ, ಕಡ್ಡಾಯವಾಗಿ ಮನೆಯಲ್ಲೇ ಶೂಟಿಂಗ್ ಮಾಡಬೇಕೆಂಬ ವಿಚಾರವೂ ಇದೆ. ಆದ ಕಾರಣ ಕಲಾವಿದರು, ತಂತ್ರಜ್ಞರುಗಳಿಗೆ ಯಾವುದೇ ರೀತಿಯ ತೊಂದರೆ ಆಗದು ಎಂಬುದು ನನ್ನ ಅಭಿಪ್ರಾಯ ಎನ್ನುವ ಶ್ರುತಿ, ಲಾಕ್ಡೌನ್ ನಂತರ ಶೂಟಿಂಗ್ ಮಾಡುವ ಸಲುವಾಗಿ ಒಂದಷ್ಟು ಪ್ಲಾನ್ ಮಾಡಿಕೊಂಡಿದ್ದಾರೆ.
ಈಗಾಗಲೇ ಶೂಟಿಂಗ್ ಮಾಡುವ ಸಮಯದಲ್ಲಿ ಶೂಟಿಂಗ್ ಜಾಗದಲ್ಲಿ ಕಡಿಮೆ ಜನ ಇರುವಂತೆ ವ್ಯವಸ್ಥೆ ಮಾಡಿರುವ ಶ್ರುತಿ ವಯಸ್ಸಾದ ಕಲಾವಿದರುಗಳು ಶೂಟಿಂಗ್ ಜಾಗಕ್ಕೆ ಕರೆಯುವುದಿಲ್ಲವಂತೆ. ಇದರ ಜೊತೆಗೆ ಮುಖ್ಯವಾದ ಕೆಲಸವೆಂದರೆ ಲಾಕ್ಡೌನ್ ಘೋಷಣೆಯಾದಾಗ ಕಲಾವಿದರುಗಳು ಅವರವರ ಊರಿಗೆ ತೆರಳಿದ್ದಾರೆ. ಯಾರೆಲ್ಲಾ ಬೆಂಗಳೂರಿನಲ್ಲಿ ಇದ್ದಾರೆ, ಊರಿನಲ್ಲಿ ಇದ್ದಾರೆ ಎಂಬುದನ್ನು ನೋಡಬೇಕಾಗಿದೆ. ಇದರ ಜೊತೆಗೆ ಕಲಾವಿದರನ್ನು ಒಟ್ಟುಗೂಡಿಸಿ, ಶೂಟಿಂಗ್ ಆರಂಭಿಸಲು ಕಡೇ ಪಕ್ಷ ಒಂದು ವಾರ ಬೇಕಾಗಬಹುದು ಎನ್ನುವ ಶ್ರುತಿ, ಶೂಟಿಂಗ್ ನಡೆಯುವ ಸಮಯದಲ್ಲಿ ಟೆಂಪರೇಚರ್ ಟೆಸ್ಟ್‌ಗಾಗಿ ಸ್ಕ್ರೀನಿಂಗ್ ಕಡ್ಡಾಯ ಮಾಡುವುದಾಗಿ ತಿಳಿಸಿದ್ದಾರೆ.