ಬಿಗ್ಬಾಸ್ನಲ್ಲಿ ಎಲಿಮಿನೇಷನ್ ಸುತ್ತು ನಡೆದರೂ ಯಾರು ಮನೆಯಿಂದ ಹೊರ ಹೋಗಿಲ್ಲ ಬದಲಾಗಿ ಟ್ವಿಸ್ಟ್ ಒಂದು ನಡೆದಿದೆ. ಸೆಕೆಂಡ್ ಇನಿಂಗ್ಸ್ ಆರಂಭವಾಗುತ್ತಿದ್ದಂತೆ ಮೊದಲ ದಿನವೇ ನಾಮಿನೇಷನ್ ನಡೆದು ಏಳು ಮಂದಿ ನಾಮಿನೇಟ್ ಆಗಿದ್ದರು. ಈ ವಾರ ಮನೆಯಿಂದ ಓರ್ವ ಸದಸ್ಯರಾದರು ಹೊರ ಬರುವುದು ಪಕ್ಕಾ ಎಂಬುದು ಪ್ರೇಕ್ಷಕರ ಲೆಕ್ಕಾಚಾರವಾಗಿತ್ತು. ಆದರೆ, ಎಲಿಮಿನೇಷನ್ನಲ್ಲಿ ಟ್ವಿಸ್ಟ್ ಸೇರ್ಪಡೆಯಾಗಿ ಯಾರು ಎಲಿಮಿನೇಟ್ ಆಗಿಲ್ಲ ಎನ್ನಲಾಗುತ್ತಿದೆ.
ಅದಕ್ಕೂ ಮೊದಲು 'ಸೂಪರ್ ಸಂಡೇ ವಿತ್ ಸುದೀಪ್' ಎಪಿಸೋಡ್ನಲ್ಲಿ ಮಂಜು ಮತ್ತು ದಿವ್ಯಾ ಸುರೇಶ್ ಅವರ ಮದುವೆ ವಿಚಾರಕ್ಕೆ ದೊಡ್ಡ ವಾಗ್ವಾದವೇ ನಡೆದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮನೆಯ ಜೋಡಿಗಳ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಅವರು ಮಾಧ್ಯಮಗಳ ಸಂದರ್ಶನದಲ್ಲಿ ಮನಬಂದಂತೆ ಮಾತನಾಡಿದ್ದಾರೆ ಎಂದು ಮೊದಲಿಗೆ ಮಂಜುನಾಥ್ ಪಾವಗಡ ಹಾಗೂ ದಿವ್ಯ ಸುರೇಶ್ ಆರೋಪಿಸಿ ಅವರ ವಿರುದ್ಧ ಕಿಡಿಕಾರಿದರು.
ನಂತರ, ವೈಷ್ಣವಿ ಕೂಡ ಅವರ ಹೇಳಿಕೆಯನ್ನು ಖಂಡಿಸಿದ್ದರು. ಆದರೆ, ಚಂದ್ರಚೂಡ್ ನಾನು ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ವಾದ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ, ಚಂದ್ರಚೂಡ ಹೇಳಿಕೆ ನೀಡಿರುವ ವಿಡಿಯೋವನ್ನು ಟ್ರೋಲ್ ಮಾಡಲಾಗಿದೆ. ಈ ಕುರಿತು ನಟ ಸುದೀಪ್ ಚರ್ಚೆಗೆ ವಿಷಯ ಎತ್ತಿಕೊಂಡರು. ಆಗ ಚಕ್ರವರ್ತಿ ಚಂದ್ರಚೂಡ್ ಈಗ ಆಕ್ಷೇಪ ಎತ್ತಿದ್ದಾರೆ. 'ಶ್ರೀಮಾನ್ ಮಂಜು ಪಾವಗಡ, ಒಂದು ಶೋಗೋಸ್ಕರ ಒಬ್ಬಳು ಹೆಣ್ಣನ್ನು ಹೆಂಡತಿಯಾಗಿ ಹೇಗೆ ಮಾಡಿಕೊಳ್ಳುತ್ತಾನೆ' ಎಂದು ಚಂದ್ರಚೂಡ್ ತೀವ್ರವಾಗಿ ಕಿಡಿಕಾರಿದ್ದಾರೆ.
ಚಂದ್ರಚೂಡ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಂಜು, 'ಅದು ನಾಟಕ ಎಂಬುದು ಇಡೀ ಮನೆಯವರಿಗೆ ಗೊತ್ತಿತ್ತು' ಎಂದಿದ್ದಾರೆ. 'ನನ್ನ ತಂದೆ-ತಾಯಿ ಇದನ್ನೆಲ್ಲ ಕಲಿಸಿಲ್ಲ ಸರ್' ಎಂದು ಚಂದ್ರಚೂಡ್ ಅವರ ಮಾತಿಗೆ ಆಕ್ಷೇಪಿಸಿದರು. ಅದಕ್ಕೆ ಪ್ರತಿಯಾಗಿ 'ಇಲ್ಲಿದ್ದಾಗ ನಕ್ಕು, ಮಜಾ ಮಾಡಿ, ಹೊರಗೆ ಹೋದಮೇಲೆ ಇದೆಲ್ಲ ನಿಮಗೆ ನೆನಪಾಯ್ತಾ' ಎಂದು ಮಂಜು ಮರುಪ್ರಶ್ನೆ ಹಾಕಿದ್ದಾರೆ.
ಈ ಮಧ್ಯೆ ದಿವ್ಯ ಸುರೇಶ್ ಕಣ್ಣೀರು ಹಾಕುತ್ತಾರೆ. ಆ ನಂತರ ಚಂದ್ರಚೂಡ್ ಬಾಗಿಲ ಬಳಿ ಬಂದು ತಮ್ಮ ಕೋಪ ಹೊರ ಹಾಕುತ್ತಾರೆ. 'ಸೂಪರ್ ಸಂಡೇ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಈ ಎಪಿಸೋಡ್ ಇಂದು ರಾತ್ರಿ ಪ್ರಸಾರವಾಗಲಿದೆ.