'ರಂಗ್ ಬಿ ರಂಗಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ತನ್ವಿ ರಾವ್ ಇದೀಗ ಮೊದಲ ಬಾರಿಗೆ ಕಿರುತೆರೆಗೆ ಬರುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಸ ಹಾರರ್ ಧಾರಾವಾಹಿ 'ಆಕೃತಿ'ಯಲ್ಲಿ ನಾಯಕಿಯಗಿ ನಟಿಸುವ ಮೂಲಕ ಕಿರುತೆರೆ ಪಯಣ ಆರಂಭಿಸಲಿದ್ದಾರೆ ತನ್ವಿ.
![Tanvi rao small screen entry](https://etvbharatimages.akamaized.net/etvbharat/prod-images/kn-bng-03-tanvirao-serial-photo-ka10018_11082020135658_1108f_1597134418_593.jpg)
ಈಗಾಗಲೇ 'ಆಕೃತಿ'ಯ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೀಕ್ಷಕರ ಮೆಚ್ಚುಗೆಗೂ ಪಾತ್ರವಾಗಿದೆ. ತನ್ವಿ ನಟಿ ಮಾತ್ರವಲ್ಲ ಅದ್ಭುತ ಭರತನಾಟ್ಯ ಕಲಾವಿದೆಯೂ ಹೌದು. ನಾಲ್ಕನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದ ತನ್ವಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೇವಲ ಭರತನಾಟ್ಯ ಮಾತ್ರವಲ್ಲದೆ ಕಥಕ್, ಸೆಮಿ ಕ್ಲಾಸಿಕಲ್ ನೃತ್ಯ ಪ್ರಾಕಾರದಲ್ಲೂ ತನ್ವಿ ಮುಂದಿದ್ದಾರೆ.
![Tanvi rao small screen entry](https://etvbharatimages.akamaized.net/etvbharat/prod-images/kn-bng-03-tanvirao-serial-photo-ka10018_11082020135658_1108f_1597134418_551.jpg)
16ನೇ ವಯಸ್ಸಿನಲ್ಲೇ ಯುರೋಪ್ ಹಾಗೂ ಏಷ್ಯಾದ 6 ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಶಿಸಿದ್ಧಾರೆ. 'ಗುಲಾಬ್ ಗ್ಯಾಂಗ್' ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಬಂದ ತನ್ವಿ ರಾವ್ ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾರಂತಹ ಮಹಾನ್ ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಗುಲಾಬ್ ಗ್ಯಾಂಗ್ ಸಿನಿಮಾದಲ್ಲಿ 13 ವರ್ಷದ ಬಾಲಕಿ ಪಾತ್ರದಲ್ಲಿ ತನ್ವಿ ಅಭಿನಯಿಸಿದ್ದಾರೆ. ನಂತರ ಗನ್ಸ್ ಆಫ್ ಬನಾರಸ್ ಸಿನಿಮಾದಲ್ಲೂ ಅಭಿನಯಿಸಿದ ಈಕೆ ಕನ್ನಡದ ರಂಗ್ ಬಿರಂಗಿ ಸಿನಿಮಾದಲ್ಲಿಯೂ ನಟಿಸಿದ್ದರು. ಇದರ ಜೊತೆಗೆ ತಮಿಳು ಸಿನಿಮಾದಲ್ಲೂ ಬಣ್ಣ ಹಚ್ಚಿರುವ ತನ್ವಿ ರಾವ್ ಸಾಕಷ್ಟು ಜನರ ಮೆಚ್ಚುಗೆಯನ್ನೂ ಗಳಿಸಿದ್ದಾರೆ.
![Tanvi rao small screen entry](https://etvbharatimages.akamaized.net/etvbharat/prod-images/kn-bng-03-tanvirao-serial-photo-ka10018_11082020135658_1108f_1597134418_536.jpg)
ಎಲ್ಲದಕ್ಕಿಂತ ಮುಖ್ಯವಾದ ವಿಚಾರವೆಂದರೆ ತಮ್ಮ ಮೊದಲ ಸಿನಿಮಾದಲ್ಲಿ ದೊರೆತ ಸಂಭಾವನೆಯನ್ನು ತಮ್ಮ ನೃತ್ಯ ಅಕಾಡೆಮಿಯಲ್ಲಿ ಕಲಿಯುತ್ತಿರುವ ಬಡ ಮಕ್ಕಳಿಗೆ ನೀಡಿರುವ ತನ್ವಿ ರಾವ್ ಇದೀಗ ಕನ್ನಡ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಮೊದಲ ಬಾರಿಗೆ ಕಿರುತೆರೆಗೆ ಕಾಲಿಡುತ್ತಿರುವ ತನ್ವಿ ಕಿರುತೆರೆ ಪ್ರೇಕ್ಷಕರನ್ನು ಗೆಲ್ಲುತ್ತಾರಾ ಕಾದು ನೋಡಬೇಕು.
![Tanvi rao small screen entry](https://etvbharatimages.akamaized.net/etvbharat/prod-images/8376839_790_8376839_1597144632066.png)