ತನ್ನ ಆಕರ್ಷಕ ನಗುವಿನಿಂದಲೇ ಎಲ್ಲರ ಮನಗೆದ್ದ ದೇವಕಿ ನಂದನ, ವಸುದೇವನ ಮುದ್ದಿನ ಮಗ, ರಾಧೆಯ ಪ್ರೀತಿಯ ಕೃಷ್ಣ, ನಾವು ಹೇಳುತ್ತಿರುವುದು ಮತ್ತಾರ ಬಗ್ಗೆಯೂ ಅಲ್ಲ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾಕೃಷ್ಣ ಧಾರಾವಾಹಿಯಲ್ಲಿ ಕೃಷ್ಣನಾಗಿ ನಟಿಸಿರುವ ಹುಡುಗನ ಬಗ್ಗೆ.
ರಾಧೆ ಸೇರಿದಂತೆ ಆ ಕೃಷ್ಣನಿಗೆ 16 ಸಾವಿರ ಪ್ರೇಯಸಿಯರಿದ್ದರಂತೆ. ಈ ಕೃಷ್ಣ ತನ್ನ ನಗುವಿನ ಮೂಲಕ ಕೋಟ್ಯಂತರ ಹೆಣ್ಣುಮಕ್ಕಳ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ. ಈ ಹುಡುಗನ ಹೆಸರು ಸುಮೇಧ್ ಮುದಗಳ್ಕರ್. ಮೂಲತಃ ಮಹಾರಾಷ್ಟ್ರದವರಾದ ಸುಮೇಧ್ ವಸುದೇವ್ ಮುದಗಳ್ಕರ್.
ಮಹಾರಾಷ್ಟ್ರದ ಪುಣೆಯ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದಿರುವ ಸುಮೇಧ್, ಬಾಲ್ಯದಿಂದಲೇ ನೃತ್ಯದಲ್ಲಿ ಬಹಳ ಆಸಕ್ತಿ ಇದ್ದವರು. 2013ರಲ್ಲಿ ಡ್ಯಾನ್ಸ್ ಮಹಾರಾಷ್ಟ್ರ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮೇಧ್, ತಮ್ಮ ಡ್ಯಾನ್ಸ್ ಮೂಲಕವೇ ಮನೆ ಮಾತಾದವರು. 2014ರಲ್ಲಿ 'ದಿಲ್ ದೋಸ್ತಿ ಡ್ಯಾನ್ಸ್ ಶೋ' ಮೂಲಕ ಕಿರುತೆರೆಗೆ ಪ್ರವೇಶಿಸಿ ಅಲ್ಲೂ ಸೈ ಎನಿಸಿಕೊಂಡ ಸುಮೇಧ್, ಮೊದಲ ಬಾರಿ ಬಣ್ಣ ಹಚ್ಚಿದ್ದು ನೆಗೆಟಿವ್ ಪಾತ್ರಕ್ಕೆ. ಚಕ್ರವರ್ತಿ ಅಶೋಕ್ ಸಾಮ್ರಾಟ್ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡ ಸುಮೇಧ್ಗೆ ಹೆಸರು ತಂದುಕೊಟ್ಟಿದ್ದು ಕೃಷ್ಣನ ಪಾತ್ರ.
ರಾಧಾಕೃಷ್ಣ ಧಾರಾವಾಹಿಯಲ್ಲಿ ಕೃಷ್ಣನಾಗಿ ಗಮನ ಸೆಳೆದಿರುವ ಸುಮೇಧ್, 'ನಾಚ್ ಬಲಿಯೇ' ಕಾರ್ಯಕ್ರಮದಲ್ಲಿ ವಿಶೇಷ ಸಂಚಿಕೆಯಲ್ಲೂ ಕೃಷ್ಣನಾಗಿ ಕಾಣಿಸಿಕೊಂಡರು. ಕಿರುತೆರೆ ಮಾತ್ರವಲ್ಲ,ಹಿರಿತೆರೆಯಲ್ಲೂ ಮಿಂಚಿರುವ ಸುಮೇಧ್ ವೆಂಟಿಲೇಟರ್ , ಮಂಝಾ , ಬಕೆಟ್ ಲಿಸ್ಟ್ ಹಾಗೂ ಇನ್ನಿತರ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೃಷ್ಣನಾಗಿ ಎಲ್ಲರ ಮನಗೆದ್ದ ಈ ಹುಡುಗ, ಗೋಲ್ಡ್ ಅವಾರ್ಡ್ನಲ್ಲಿ ಬೆಸ್ಟ್ ಆ್ಯಕ್ಟರ್ ಡೆಬ್ಯೂ ಪ್ರಶಸ್ತಿ, ಏಷಿಯನ್ ಅಕಾಡೆಮಿ ಕ್ರಿಯೇಟಿವ್ ಈವೆಂಟ್ನಲ್ಲಿ ಕೃಷ್ಣನ ಪಾತ್ರಕ್ಕೆ ಉತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ. ಇದರ ಜೊತೆಗೆ ರೇಡಿಯೋ ಸಿಟಿ ಅವಾರ್ಡ್ನಲ್ಲಿ ಉತ್ತಮ ನಟ , ಬೆಸ್ಟ್ ಮೇಲ್ ಡೆಬ್ಯೂ , ಬೆಸ್ಟ್ ವಿಲನ್ ಪ್ರಶಸ್ತಿಗಳನ್ನು ಕೂಡಾ ತಮ್ಮದಾಗಿಸಿಕೊಂಡಿದ್ದಾರೆ.